

ಹೈದರಾಬಾದ್: ಇಸ್ಲಾಂ ಧರ್ಮದಲ್ಲಿ ಆಚರಿಸಲ್ಪಡುವ ಎರಡು ಪ್ರಮುಖ ಹಬ್ಬಗಳೆಂದರೆ ಒಂದು ರಂಜಾನ್, ಮತ್ತೊಂದು ಬಕ್ರೀದ್ ಹಬ್ಬ ಎಂದು ಹೇಳಬಹುದಾಗಿದೆ. ಆದರೆ, ಬಕ್ರೀದ್ ಹಬ್ಬದ ಪ್ರಯುಕ್ತ ಶುಭ ಕೋರಿ ಹಾಕಲಾಗಿದ್ದ ಪೋಸ್ಟ್ ಒಂದು ಈಗ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಶಾಸಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ರೆಲಂಗಾಣದ ಭೋಂಗೀರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕುಂಭಂ ಅನಿಲ್ ಕುಮಾರ್ ರೆಡ್ಡಿ ಬಕ್ರೀದ್ ಹಬ್ಬಕ್ಕೆ ಶುಭಾಶಯ ಕೋರುವ ಪೋಸ್ಟ್ ನಲ್ಲಿ ಹಸುವಿನ ಗ್ರಾಫಿಕ್ ಚಿತ್ರವನ್ನು ಬಳಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತ ಇವರ ಈ ಒಂದು ಪೋಸ್ಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶಾಸಕ ಅನಿಲ್ ಇದು ಕಣ್ತಪ್ಪಿನಿಂದ ಆದ ಎಡವಟ್ಟು ಎಂದು ಹೇಳಿದ್ದಾರೆ
ಈ ಕುರಿತು ಮಾತನಾಡಿದ ಶಾಸಕ ಅನಿಲ್ ರೆಡ್ಡಿ, ನಾನೊಬ್ಬ ರಾಮಭಕ್ತನಾಗಿದ್ದು, ಅಚಾತುರ್ಯದ ದೋಷಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಲ್ಲಾ ಸಂಬಂಧಿತ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ. ಪೋಸ್ಟ್‌ನಲ್ಲಿ ಮೇಕೆಯ ಚಿತ್ರ ಇರಬೇಕಿತ್ತು. ಕಣ್ತಪ್ಪಿನಿಂದ ಗಿ ಹಸುವಿನ ಚಿತ್ರವನ್ನು ಬಳಸಲಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರ ಬಕ್ರೀದ್ ಪೋಸ್ಟ್‌ಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಮತ್ತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾಜಾ ಸಿಂಗ್, ಕಾಂಗ್ರೆಸ್ ಸರ್ಕಾರ ರಚಿಸುವಲ್ಲೆಲ್ಲಾ ಹಿಂದೂಗಳನ್ನು ಅವಮಾನಿಸಲಾಗುತ್ತದೆ. ಬಕ್ರೀದ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುವುದರಲ್ಲಿ ಆಕ್ಷೇಪಾರ್ಹ ಏನೂ ಇಲ್ಲ, ಆದರೆ ಶಾಸಕರು ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.