

ಜೈಪುರ: ಎಷ್ಟೇ ಬಾರಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಮುಂದಾದರು ಅದನ್ನು ಕೇಳದೆ ಇರುವ ಕಾಂಗ್ರೆಸ್ ಶಾಸಕನನ್ನು ನಿವೃತ್ತ ಸಿಆರ್ಪಿಎಫ್ ಯೋಧರೊಬ್ಬರು ಮನಸೋಇಚ್ಛೆ ಥಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕಾಂಗ್ರೆಸ್ ಶಾಸಕನನ್ನು ರಫೀಕ್ ಖಾನ್ ಎಂದು ಗುರುತಿಸಲಾಗಿದ್ದು, ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಿಕಾಸ್ ಜಾಖಾ ಎಂದು ಗುರುತಿಸಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕಾಂಗ್ರೆಸ್ ಶಾಸಕನ ಮೇಲೆ ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ಸಾರ್ವಜನಿಕರು ಹಾಗೂ ಬೆಂಬಲಿಗರು ಹಿಡಿದು ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಮಧ್ಯಪ್ರವೇಶಿಸುವ ಪೊಲೀಸರು ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಶಕ್ಕೆ ಪಡೆಯುವುದನ್ನು ನೋಡಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಅನಿತ್ ಕುಮಾರ್, ಶಾಸಕರ ಮೇಲೆ ಹಲ್ಲೆ ಮಾಡಿದವರನ್ನು ವಿಕಾಸ್ ಜಾಖಾ ಎಂದು ಗುರುತಿಸಲಾಗಿದ್ದು, ಇವರು ನಿವೃತ್ತ ಸಿಆರ್ಪಿಎಫ್ ಯೋಧರೆಂದು ತಿಳಿದು ಬಂದಿದೆ. ತನ್ನ ಹೆಂಡತಿ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಹಲವು ದಿನಗಳಿಂದ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಶಾಸಕರನ್ನು ಸಂಪರ್ಕಿಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಕುಪಿತಗೊಂಡ ಆತ ಹಲ್ಲೆ ಮಾಡಿದ್ದಾನೆಂದು ತಿಳಿದು ಬಂದಿದೆ. ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಶಾಸಕ ರಫೀಕ್ ಖಾನ್ ಮಾತನಾಡಿ, ಮನೆ ಬಳಿ ಬಂದಿದ್ದ ಸಾರ್ವಜನಿಕರನ್ನು ಮಾತನಾಡಿಸಿ ನಾನು ಹೊರಡುವ ವೇಳೆಗೆ ವ್ಯಕ್ತಿಯೋರ್ವ ನನ್ನ ಬಳಿ ಓಡಿ ಬರುತ್ತಿರುವುದನ್ನು ನೋಡಿ ಕಾರನ್ನು ನಿಲ್ಲಿಸಲು ಸೂಚನೆ ನೀಡಿದೆ. ಆತ ಏಕಾಏಕಿ ನನ್ನ ಕುತ್ತಿಗೆಗೆ ಕೈ ಹಾಕಿ ಎದೆ ಭಾಗಕ್ಕೆ ಜೋರಾಗಿ ಹೊಡೆದ. ಕೂಡಲೇ ಅಲ್ಲಿದ್ದವರು ನನ್ನನ್ನು ರಕ್ಷಿಸಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ದೂರು ದಾಖಲಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.