

ಬೆಂಗಳೂರು: ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿದ್ದರು. ಏನೆಲ್ಲ ಪ್ರಚಾರ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ನವರು ಹತಾಶರಾಗಿ ಕಾರ್ಯಸಾಧುವಲ್ಲದ ಯೋಜನೆಗಳನ್ನು ಘೋಷಿಸಿ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಸುದ್ದಿಗಾರರಿಗೆ ಬುಧವಾರ ಪ್ರತಿಯಿಸಿದ ಅವರು, ನಾ ನಾಯಕಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾಗಾಂಧಿಯವರು ಗೃಹಿಣಿಯರಿಗೆ ಮಾಸಿಕ 2000 ರೂ. ಭತ್ಯೆ ಘೋಷಿಸಿದ್ದಾರೆ. ಅದಕ್ಕೂ ಮುಂಚೆಯೇ ನಾನು ಈ ಯೋಜನೆ ಪ್ರಕಟಿಸಿರುವೆ. ರಾಜ್ಯದ ಹಣಕಾಸಿನ ಲಭ್ಯತೆ, ಕಾರ್ಯಸಾಧು ಎನ್ನುವುದನ್ನು ಪರಿಗಣಿಸಿ ಯೋಜನೆ ಘೋಷಿಸಿದ್ದು, ಈ ವಿಷಯದಲ್ಲಿ ಸರ್ಕಾರ ಅತ್ಯಂತ ಗಂಭೀರವಾಗಿದೆ ಎಂದರು.
ಕಾಂಗ್ರೆಸ್ ನವರು ಗ್ಯಾರಂಟಿ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದಾರೆ. ಸುದೀರ್ಘಾವಧಿಗೆ ಆಡಳಿತ ನಡೆಸಿದವರು ಅವರೇ. ಆವಾಗ ಈ ಯೋಜನೆಗಳನ್ನು ಜಾರಿಗೆ ತರಲಿಲ್ಲವೇಕೆ ? ಮುಂದೆಯೂ ಜಾರಿಗೊಳಿಸುತ್ತಾರೆ ಎಂಬ ಗ್ಯಾರಂಟಿ ಏನು ? ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.
ಮೋದಿ ರಾಜ್ಯಕ್ಕೆ ನಾಳೆ ಭೇಟಿ
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ನಾಳೆ ಭೇಟಿ ನೀಡುತ್ತಿದ್ದು, ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಏಷ್ಯಾದಲ್ಲಿ ಮೊದಲಬಾರಿಗೆ ಅಳವಡಿಸಿದ ಸ್ವಯಂಚಾಲಿತ ನೀರು ನಿರ್ವಹಣಾ ವ್ಯವಸ್ಥೆ ಹಾಗೂ ಆಧುನೀಕರಿಸಿದ ನಾರಾಯಣಪುರ ಎಡದಂಡೆ ಕಾಲುವೆ ಲೋಕಾರ್ಪಣೆ ಮಾಡಲಿದ್ದಾರೆ. ಯಾದಗಿರಿ ಜಿಲ್ಲೆಯ ಕೊಡೆಕಲ್ ನಲ್ಲಿ ಈ ಸಮಾರಂಭ ಆಯೋಜಿಸಲಾಗಿದೆ.
ಹಟ್ಟಿ, ತಾಂಡಾ ನಿವಾಸಿಗಳು ದಶಕಗಳಿಂದ ನಿರೀಕ್ಷಿಸುತ್ತಿದ್ದ ಕಂದಾಯ ಗ್ರಾಮದ ಮಾನ್ಯತೆ, ಹಕ್ಕುಪತ್ರದ ಕನಸು ನಾಳೆ ನನಸಾಗಲಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕು ಮಳಖೇಡಾದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಮೋದಿಯವರು ಹಕ್ಕುಪತ್ರ ವಿತರಿಸಲಿದ್ದು, 50 ಸಾವಿರ ನಿವಾಸಿಗಳಿಗೆ ನೆಲೆಸಿದ ಜಾಗ ಒಡೆತನ ಜತೆಗೆ ಸರ್ಕಾರಿ ಯೋಜನೆಗಳ ಲಾಭ ಪಡೆಯುವ ಅರ್ಹತೆಯೂ ಲಭಿಸಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.