

ಹೈದರಾಬಾದ್: ಕಾಂಗ್ರೆಸ್ ಭಾರತೀಯ ರಣಹದ್ದುಗಳ ಪಕ್ಷವಾಗಿದ್ದು, ಎಐಸಿಸಿ ಎಂದರೆ ಅಖಿಲ ಭಾರತ ಭ್ರಷ್ಟಾಚಾರ ಸಮಿತಿ ಆಗಿದೆ. ದೇಶದಲ್ಲಿ ಭ್ರಷ್ಟಾಚಾರ ಮತ್ತು ಅದಕ್ಷತೆಗೆ ಇರುವ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಆರ್ಎಸ್ ಪಕ್ಷವನ್ನ ಬಿಜೆಪಿ ರಿಷ್ತೇದಾರ್ ಸಮಿತಿ ಎಂದು ಬಣ್ಣಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೆಟಿ ರಾಮರಾವ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ನಡೆಸಿದ ಹಗರಣಗಳ ಇತಿಹಾಸವನ್ನು ಭಾರತದ ಜನರು ಮರೆತಿಲ್ಲ. ಬಿಆರ್ಎಸ್ ಪಕ್ಷವು, ಬಿಜೆಪಿಯ ಬಿ-ಟೀಮ್ ಅಥವಾ ಕಾಂಗ್ರೆಸ್ನ ಸಿ-ಟೀಮ್ ಅಲ್ಲ. ಬದಲಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಏಕಾಂಗಿಯಾಗಿ ಎದುರಿಸಬಲ್ಲ ಪಕ್ಷ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ತೈವಾನ್ ಟೆಕ್ ಕಂಪನಿಗಳು ಬೀಜಿಂಗ್ನಿಂದ ಭಾರತಕ್ಕೆ ಸ್ಥಳಾಂತರ; ಈ ನಿರ್ಧಾರಕ್ಕೆ ಕಾರಣ ಇಂತಿದೆ….
ಬಿಆರ್ಎಸ್ನ್ನು ನೇರವಾಗಿ ಎದುರಿಸಲು ಹೆದರಿರುವ ಕಾಂಗ್ರೆಸ್, ಬಿಜೆಪಿಯ ಹೆಗಲ ಮೇಲೆ ಬಂದೂಕು ಇಟ್ಟು ನಮ್ಮ ಮೇಲೆ ಗುಂಡು ಹಾರಿಸಲು ಯತ್ನಿಸುತ್ತಿದೆ. ಆದರೆ ಹೀಗೆ ಮಾಡುವಾಗ ಆ ಗುಂಡು ಕಾಂಗ್ರೆಸ್ ಕಾಲಿಗೆ ಬೀಳುವ ಸಾಧ್ಯತೆ ಇದೆ ಎಂದು ಕೆಟಿಆರ್ ಹೇಳಿದ್ದಾರೆ.
ಕಾಳೇಶ್ವರಂ ಯೋಜನೆ ಜಾರಿ ವೇಳೆ 1 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ರಾಹುಲ್ ಹೇಳಿದ್ದು, ಒಂದು ಯೋಜನೆಯ ಒಟ್ಟು ಮೌಲ್ಯ 1 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇರುವಾಗ ಅಷ್ಟು ದೊಡ್ಡ ಭ್ರಷ್ಟಾಚಾರ ಹೇಗೆ ನಡೆಯುತ್ತದೆ? ಅಸಂಬದ್ಧ ಆರೋಪಗಳನ್ನು ಮಾಡುವ ಮೂಲಕ ನೀವು ಸಾರ್ವಜನಿಕರ ಮುಂದೆ ನಗೆಪಾಟಲಿಗೀಡಾಗಲು ಬಯಸುತ್ತೀರಿ ಎಂದು ಕೆಟಿಆರ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ…ಕೃತಿ ಶೆಟ್ಟಿಗೆ ಆಹ್ವಾನ ಕೊಟ್ಟ ಸ್ಟಾರ್ ನಟನ ಮಗ
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಮಾಸಿಕ 4,000 ರೂಪಾಯಿ ಪಿಂಚಣಿ ನೀಡುವುದಾಗಿ ರಾಹುಲ್ ಭಾನುವಾರ ಘೋಷಿಸಿದ್ದರು. ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯ ಭರವಸೆಯನ್ನು ಈಡೇರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕರ್ನಾಟಕದಲ್ಲಿ ಜನರು ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದು ಅದರ ದಕ್ಷತೆಯಿಂದಲ್ಲ, ಬಿಜೆಪಿ ಬದಲಿಗೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲದ ಕಾರಣದಿಂದ ಎಂದು ಅವರು ಒತ್ತಿ ಹೇಳಿದರು.(ಏಜೆನ್ಸೀಸ್)