PM Modi | ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೃಷಿ ವಲಯವನ್ನು ನಿರ್ಲಕ್ಷಿಸಿದೆ: ಪ್ರಧಾನಿ ಮೋದಿ ವಾಗ್ದಾಳಿ

PM Modi
Published on

PM Modi: ಕೇಂದ್ರದಲ್ಲಿ 2004 ರಿಂದ 2014 ರವರೆಗೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು ಕೃಷಿ ವಲಯವನ್ನು ನಿರ್ಲಕ್ಷಿಸಿತ್ತು ಎಂದು ಕಾಂಗ್ರೆಸ್ ವಿರುದ್ಧ ಶನಿವಾರ (ಅಕ್ಟೋಬರ್​,11) ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಶೇಷ ಕೃಷಿ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡಿದ ಮೋದಿ, ಕಳೆದ ತಿಂಗಳು ಜಾರಿಗೆ ಬಂದ ಜಿಎಸ್‌ಟಿ ಸುಧಾರಣೆಗಳನ್ನು ಶ್ಲಾಘಿಸಿದ್ದಾರೆ. ಇವು ರೈತರಿಗೆ ಮತ್ತು ದೇಶದ ಗ್ರಾಮೀಣ ವಲಯಕ್ಕೆ ಮತ್ತಷ್ಟು ಪ್ರಯೋಜನವನ್ನು ನೀಡುತ್ತವೆ. ಅಲ್ಲದೆ, ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಅವರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ತಮ್ಮ ಸರ್ಕಾರ ಹೊಂದಿದೆ. ಯುಪಿಎ ಸರ್ಕಾರದ 10 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಸಬ್ಸಿಡಿಗೆ ಹೋಲಿಸಿದರೆ ಎನ್‌ಡಿಎ ಕಳೆದ 10 ವರ್ಷಗಳಲ್ಲಿ ರಸಗೊಬ್ಬರಗಳಿಗೆ 13 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಿದೆ ಎಂದು ಮೋದಿ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಮೋದಿ, ಕಾಲ ಬದಲಾದಂತೆ ಕೃಷಿಗೆ ಸರ್ಕಾರದ ಬೆಂಬಲ ಸಿಗುವುದು ಬಹಳ ಮುಖ್ಯ. ದುರದೃಷ್ಟವಶಾತ್, ಹಿಂದಿನ ಸರ್ಕಾರಗಳು ಕೃಷಿಯನ್ನು ಕೈಬಿಟ್ಟವು. ಸರ್ಕಾರಕ್ಕೆ ಕೃಷಿಯ ಬಗ್ಗೆ ಯಾವುದೇ ದೃಷ್ಟಿಕೋನ ಮತ್ತು ಚಿಂತನೆ ಇರಲಿಲ್ಲ ಎಂದು ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಕಾಂಗ್ರೆಸ್​ ಸರ್ಕಾರವು ಕೃಷಿಗೆ ಸಂಬಂಧಿಸಿದ ವಿವಿಧ ಸರ್ಕಾರಿ ಇಲಾಖೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು, ಇದು ಭಾರತದ ಕೃಷಿ ವ್ಯವಸ್ಥೆಯನ್ನು ನಿರಂತರವಾಗಿ ದುರ್ಬಲಗೊಳಿಸಲು ಕಾರಣವಾಯಿತು ಎಂದು ಪ್ರಧಾನಿ ಕಿಡಿಕಾರಿದ್ದಾರೆ.

ಹಿಂದಿನ ಸರ್ಕಾರಗಳು ಕೃಷಿಯ ಬಗ್ಗೆ ಹೊಂದಿದ್ದ ನಿರ್ಲಕ್ಷ್ಯ ಮನೋಭಾವವನ್ನು ನಾವು ಬದಲಾಯಿಸಿದ್ದೇವೆ. ಕೃಷಿ ಬೀಜಗಳಿಂದ ಮಾರುಕಟ್ಟೆಯವರೆಗೆ ನಿಮ್ಮೆಲ್ಲ ರೈತರ ಅನುಕೂಲಕ್ಕಾಗಿ ನಾವು ಲೆಕ್ಕವಿಲ್ಲದಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ನಮ್ಮ ಸರ್ಕಾರದ ಸವಧಿಯಲ್ಲಿ ಭಾರತದ ಕೃಷಿ ರಫ್ತು ಬಹುತೇಕ ದ್ವಿಗುಣಗೊಂಡಿದೆ. ನಮ್ಮ ದೇಶದ ಧಾನ್ಯಗಳು ಮತ್ತು ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯು ಕ್ರಮವಾಗಿ ಸುಮಾರು 90 ಮಿಲಿಯನ್ ಮೆಟ್ರಿಕ್ ಟನ್ ಮತ್ತು 64 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ ಎಂದಿದ್ದಾರೆ. ಅಲ್ಲದೆ, 2014 ರಿಂದ ಭಾರತದ ಜೇನುತುಪ್ಪದ ಉತ್ಪಾದನೆಯು ದ್ವಿಗುಣಗೊಂಡಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.

ದೇಶದಲ್ಲಿ ವಂಚಿತರಿಗೆ ಆದ್ಯತೆ ನೀಡಿದಾಗ ಮತ್ತು ಹಿಂದುಳಿದ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದಾಗ, ಫಲಿತಾಂಶಗಳು ಗಮನಾರ್ಹವಾಗುತ್ತವೆ. ನಮ್ಮ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ, ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ, ಮಕ್ಕಳ ಆರೋಗ್ಯ ಸುಧಾರಿಸಿದೆ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಿದೆ ಎಂದು ಮೋದಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net