ಮೊದಲ ದಿನ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರೆಷ್ಟು? ಸರ್ಕಾರಕ್ಕಾದ ಖರ್ಚೆಷ್ಟು? ಇಲ್ಲಿದೆ ಪೂರ್ಣ ವಿವರ…

Shakti Yojana
Published on

ಬೆಂಗಳೂರು: ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಉಚಿತ ಪ್ರಯಾಣದ 'ಶಕ್ತಿ' ಯೋಜನೆಗೆ ನಿನ್ನೆ(ಜೂ.11) ಚಾಲನೆ ಸಿಕ್ಕಿದೆ. ಇದೀಗ ಮೊದಲ ದಿನ ಎಷ್ಟು ಜನ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಅಂಕಿ-ಅಂಶ ಹೊರಬಿದ್ದಿದೆ.

ಶಕ್ತಿ ಯೋಜನೆಯಡಿ ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12ರವರೆಗೆ 5,71,023 ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಕೆಎಸ್​ಆರ್​ಟಿಸಿ ನಿಗಮ ಅಧಿಕೃತ ಅಂಕಿ-ಅಂಶಗಳನ್ನುಬಿಡುಗಡೆಗೊಳಿಸಿದೆ. ಮೊದಲ ದಿನ ಐದು ಲಕ್ಷಕ್ಕೂ ಅಧಿಕ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದರಿಂದ ನಾಲ್ಕು ನಿಗಮಗಳಿಗೆ ಒಟ್ಟು 1,40,22, 898 ರೂಪಾಯಿಯನ್ನು ರಾಜ್ಯ ಸರ್ಕಾರ ಭರಿಸಬೇಕಿದೆ.

ನಿಗಮವಾರು ಸಂಚರಿಸಿದವರ ವಿವರ

KSRTC
ಪ್ರಯಾಣಿಸಿದ ಮಹಿಳೆಯರು: 1,93, 831
ವೆಚ್ಚ: 58,16,178 ರೂ.

BMTC
ಪ್ರಯಾಣಿಸಿದ ಮಹಿಳೆಯರು: 2,01,215
ವೆಚ್ಚ: 26,19,604 ರೂ.

NWKRTC
ಪ್ರಯಾಣಿಸಿದ ಮಹಿಳೆಯರು: 1,22,354
ವೆಚ್ಚ: 36,17,096 ರೂ.

KKRTC
ಪ್ರಯಾಣಿಸಿದ ಮಹಿಳೆಯರು: 53,623
ವೆಚ್ಚ: 19,70,000 ರೂ.

ರಾಜ್ಯದ ಎಲ್ಲ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಪ್ರತಿನಿತ್ಯ 41.81 ಲಕ್ಷ ಮಹಿಳೆಯರು (11.58 ಲಕ್ಷ ಪಾಸ್ ಪ್ರಯಾಣಿಕರು ಸೇರಿ) ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ರಾಜ್ಯದ 6,308 ನಗರ, 5,958 ಸಾಮಾನ್ಯ ಹಾಗೂ 6,443 ವೇಗದೂತ ಸೇರಿದಂತೆ ಒಟ್ಟು 18,609 ಬಸ್‌ಗಳಲ್ಲಿ ಪ್ರಯಾಣಿಸಬಹುದು.

ಬಡವರ ಜೇಬಿಗೆ ದುಡ್ಡು ಹಾಕುವುದೇ ನಮ್ಮ ಕೆಲಸ

ಶ್ರೀಮಂತರ ಜೇಬಲ್ಲಿ ದುಡ್ಡಿದ್ದರೆ ಹೆಚ್ಚು ಉಪಯೋಗ ಆಗುವುದಿಲ್ಲ. ಬಡವರ ಜೇಬಿಗೆ ಹಾಕಿದರೆ ಉಪಯೋಗವಾಗುತ್ತದೆ. ಬಡವರ ಜೇಬಿಗೆ ದುಡ್ಡು ಹಾಕುವುದೇ ನಮ್ಮ ಕೆಲಸ. ಶ್ರೀಮಂತರ ಜೇಬಿಗೆ ದುಡ್ಡು ಹಾಕಿದರೆ ಅದು ಬೆಳೆಯುವುದಿಲ್ಲ. ಆರ್ಥಿಕ ಪ್ರಗತಿಗೆ ಬಡವರ ಜೇಬಿಗೆ ದುಡ್ಡು ಹಾಕುವುದೇ ಮುಖ್ಯ ಎಂದು ಯೋಜನೆ ಲೋಕಾರ್ಪಣೆ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಿಲ್ಲ

ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುವುದಿಲ್ಲ. ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಇದರಿಂದ ಉಪಯೋಗವಾಗುತ್ತದೆ. ನಮ್ಮ ಕೆಲಸಗಳೇ ಪ್ರತಿಪಕ್ಷಗಳ ಟೀಕೆಗೆ ಉತ್ತರ ಕೊಡುತ್ತವೆ. ನಾವು ಐದು ವರ್ಷವೂ ಕೊಟ್ಟ ಗ್ಯಾರಂಟಿಯನ್ನು ನೀಡುತ್ತೇವೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net