

Yogi Adityanath: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ 7 ಆರೋಪಿಗಳನ್ನು ಖುಲಾಸೆಗೊಳಿಸಿದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ(ಜುಲೈ 31) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸಿಎಂ ಯೋಗಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳ ಖುಲಾಸೆಯು 'ಸತ್ಯಮೇವ ಜಯತೇ' ಎಂಬ ವಾಕ್ಯವನ್ನು ಜೀವಂತವಾಗಿರಿಸಿದೆ. ಈ ತೀರ್ಪು ಮತ್ತೊಮ್ಮೆ ಕಾಂಗ್ರೆಸ್ಸಿನ ಭಾರತ ವಿರೋಧಿ, ನ್ಯಾಯ ವಿರೋಧಿ ಮತ್ತು ಸನಾತನ ವಿರೋಧಿ ಮುಖವಾಡವನ್ನು ಬಹಿರಂಗಪಡಿಸಿದೆ. ಈ ಘಟನೆಯು 'ಕೇಸರಿ ಭಯೋತ್ಪಾದನೆ' ಎಂಬ ಸುಳ್ಳು ಪದವನ್ನು ಸೃಷ್ಟಿಸಿತು ಮತ್ತು ಕೋಟ್ಯಾಂತರ ಸನಾತನ ಭಕ್ತರು, ಸಂತರು ಮತ್ತು ದೇಶಭಕ್ತರ ಅಪಖ್ಯಾತಿಗೆ ಕಾರಣವಾಯಿತು" ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಮಾಡಿರುವ ತಪ್ಪಿಗೆ ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು ಮತ್ತು ರಾಷ್ಟ್ರದ ಮುಂದೆ ಕ್ಷಮೆಯಾಚಿಸಬೇಕು ಎಂದು ಸಿಎಂ ಯೋಗಿ ಹೇಳಿದ್ದಾರೆ.
2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ 7 ಆರೋಪಿಗಳನ್ನು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯವು ಗುರುವಾರ ಖುಲಾಸೆಗೊಳಿಸಿದೆ. ಬಿಜೆಪಿಯ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ನೇರ ಸಾಕ್ಷ್ಯಾಧಾರಗಳ ಕೊರತೆ ಮತ್ತು ಹಲವು ಲೋಪಗಳನ್ನು ಉಲ್ಲೇಖಿಸಿ ಕೋರ್ಟ್ ತೀರ್ಪು ನೀಡಿದೆ.(ಏಜೆನ್ಸೀಸ್)