

Malegaon Blast Case : ಸುದೀರ್ಘ ವಿಚಾರಣೆಗೆ ಒಳಪಟ್ಟ 2008ರ ಮಾಲೆಂಗಾವ್ ಸ್ಫೋಟ ಪ್ರಕರಣದಲ್ಲಿ ಕೊನೆಗೂ ತೀರ್ಪು ಹೊರಬಿದ್ದಿದೆ. ಮಾಜಿ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಹಾಗೂ ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಎಲ್ಲ 7 ಆರೋಪಿಗಳನ್ನು ಮುಂಬೈ ವಿಶೇಷ ನ್ಯಾಯಾಲಯ ಇಂದು (ಜುಲೈ 31) ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ಅವರು ಕೇವಲ ಅನುಮಾನದಿಂದ ಈ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲದೆ, ಆರೋಪಿಗಳ ವಿರುದ್ಧ ದಾಖಲಾಗಿರುವ ಆರೋಪಗಳನ್ನು ಅನುಮಾನ ಮೀರಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಧೀಶರು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಸಮಾಜದ ವಿರುದ್ಧ ಒಂದು ಗಂಭೀರ ಘಟನೆ ನಡೆದು ಹೋಗಿದೆ. ಆದರೆ, ನ್ಯಾಯಾಲಯವು ಕೇವಲ ನೈತಿಕ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಈ ಪ್ರಕರಣದಲ್ಲಿ ಪ್ರಗ್ಯಾ ಠಾಕೂರ್ ಮತ್ತು ಪುರೋಹಿತ್ ಅವರಲ್ಲದೆ, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸುಧಾಕರ್ ಚತುರ್ವೇದಿ, ಅಜಯ್ ರಹಿರ್ಕರ್, ಸುಧಾಕರ್ ಧರ್ ದ್ವಿವೇದಿ ಅಲಿಯಾಸ್ ಶಂಕರಾಚಾರ್ಯ ಮತ್ತು ಸಮೀರ್ ಕುಲಕರ್ಣಿ ಅವರನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ.
2008, ಸೆಪ್ಟೆಂಬರ್ 29 ರಂದು ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಮಾಲೆಗಾಂವ್ ಪಟ್ಟಣದಲ್ಲಿ ಮೋಟಾರ್ ಸೈಕಲ್ಗೆ (ಎಲ್ಎಂಎಲ್ ಫ್ರೀಡಂ ಬೈಕ್) ಜೋಡಿಸಲಾದ ಸ್ಫೋಟಕ ಸಾಧನ ಸ್ಫೋಟಗೊಂಡು ಘಟನೆಯಲ್ಲಿ ಆರು ಮಂದಿ ದುರಂತ ಸಾವಿಗೀಡಾಗಿದ್ದರು. ಅಲ್ಲದೆ, 100ಕ್ಕೂ ಅಧಿಕ ಜನರು ಸ್ಫೋಟದಿಂದ ಗಾಯಗೊಂಡರು. ಪವಿತ್ರ ರಂಜಾನ್ ಮಾಸದಲ್ಲೇ ಈ ಭೀಕರ ಸ್ಫೋಟ ಸಂಭವಿಸಿತ್ತು. ಆರಂಭದಲ್ಲಿ ಈ ಪ್ರಕರಣವನ್ನ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ತನಿಖೆ ನಡೆಸಿತು.ಇದಾದ ನಂತರ 2011ರಲ್ಲಿ ಎನ್ಐಎಗೆ ವರ್ಗಾಯಿಸಲಾಯಿತು.
ಈ ಸ್ಫೋಟವು ಅಭಿನವ್ ಭಾರತ್ ಗುಂಪನ್ನು ಒಳಗೊಂಡ ಪಿತೂರಿಯ ಭಾಗವಾಗಿದೆ ಎಂದು ಎಟಿಎಸ್ ಆರೋಪಿಸಿತ್ತು. 2008ರಲ್ಲಿ ಬಂಧಿಸಲ್ಪಟ್ಟ ಪ್ರಗ್ಯಾ ಠಾಕೂರ್ ಅವರು ಸ್ಫೋಟಕ್ಕೆ ಬಳಸಲಾದ ಮೋಟಾರ್ ಸೈಕಲ್ನ ಮಾಲೀಕ ಎಂದು ಎಟಿಎಸ್ ಆರೋಪ ಮಾಡಿತ್ತು. ಅಲ್ಲದೆ, ಆಗ ಮಿಲಿಟರಿ ಗುಪ್ತಚರ ವಿಭಾಗದಲ್ಲಿ ನಿಯೋಜನೆಗೊಂಡಿದ್ದ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸ್ಫೋಟಕಗಳನ್ನು ಜೋಡಿಸಲು ಸಹಾಯ ಮಾಡಿದರು ಮತ್ತು ಅಭಿನವ ಭಾರತ್ ಸಭೆಗಳ ಭಾಗವಾಗಿದ್ದರು ಎಂದು ಎಟಿಎಸ್ ಹೇಳಿತ್ತು.
ಆದರೆ, ಪುರೋಹಿತ್ ಅವರು ಆರ್ಡಿಎಕ್ಸ್ ತಂದು ಬಾಂಬ್ ಜೋಡಿಸಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಇಂದು (ಜುಲೈ 31) ನ್ಯಾಯಾಲಯ ಹೇಳಿದೆ. ಪ್ರಗ್ಯಾ ಠಾಕೂರ್ ಅವರು ವಾಹನದ ಮಾಲೀಕರು ಎಂಬುದಕ್ಕೂ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಧೀಶ ಲಹೋಟಿ ಅವರು ಹೇಳಿದ್ದಾರೆ.
ಇನ್ನು ಅಭಿನವ್ ಭಾರತ್ ಗುಂಪು ಅಥವಾ ಸಂಘಟನೆ ಯಾವುದೇ "ಭಯೋತ್ಪಾದಕ ಚಟುವಟಿಕೆ"ಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ನ್ಯಾಯಾಲಯವು ಎಲ್ಲ 7 ಆರೋಪಿಗಳನ್ನು ಈ ಆರೋಪ ಮುಕ್ತ ಮಾಡಿ, ಪ್ರಕರಣದಿಂದ ಖುಲಾಸೆಗೊಳಿಸಿದೆ. (ಏಜೆನ್ಸೀಸ್)