

ಕಾಸರಗೋಡು: ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಯಾನ ಕಾದಂಬರಿಯನ್ನು ಕನ್ನಡದಿಂದ ಮಲಯಾಳಕ್ಕೆ ಅನುವಾದ ಮಾಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಭಾಜನರಾದ ಕಾಸರಗೋಡಿನ ಕೆ.ವಿ.ಕುಮಾರನ್ ಅವರಿಗೆ ಕಾಸರಗೋಡು ಕನ್ನಡ ಭವನ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಬೆಂಗಳೂರು ದ್ರಾವಿಡ ಭಾಷಾ ಅನುವಾದಕರ ಸಂಘ ಜಂಟಿ ಆಶ್ರಯದಲ್ಲಿ ನಡೆದ ಮಲಯಾಳಂ-ಕನ್ನಡ ಅನುವಾದ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು. ಕನ್ನಡ ಭವನ ರೂವಾರಿಗಳಾದ ಡಾ.ವಾಮನ್ ರಾವ್ ಬೇಕಲ್, ಸಂಧ್ಯಾ ರಾಣಿ ನೇತೃತ್ವ ವಹಿಸಿದ್ದರು. ಗೌರವಾಧ್ಯಕ್ಷ ಪ್ರದೀಪ್ ಬೇಕಲ್ ಅಭಿನಂದನಾ ಪತ್ರ ನೀಡಿ, ನಿಕಟಪೂರ್ವ ಅಧ್ಯಕ್ಷ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಸ್ಮರಣಿಕೆ ನೀಡಿ ಗೌರವಿಸಿದರು. ಮಲಯಾಳ ಸಾಹಿತಿ ರವೀಂದ್ರನ್ ಪಾಡಿ ಅಭಿನಂದನಾ ಭಾಷಣ ಮಾಡಿದರು.
ಡಿಬಿಟಿಎ ಅಧ್ಯಕ್ಷೆ ಡಾ.ಸುಷ್ಮಾ ಶಂಕರ್ ಬೆಂಗಳೂರು, ಕಣ್ಣೂರು ವಿವಿ ಸೆನೆಟ್ ಸದಸ್ಯ ಡಾ.ರತ್ನಾಕರ ಮಲ್ಲಮೂಲೆ, ಕುಪ್ಪಮ್ ಯೂನಿವರ್ಸಿಟಿ ಡಾ.ಶಿವಕುಮಾರ್, ಡಿಬಿಟಿಎ ಪ್ರಧಾನ ಕಾರ್ಯದರ್ಶಿ ಡಾ.ರೋಷನ್, ಕನ್ನಡ ಭವನ ಪ್ರಕಾಶನ, ಪ್ರಕಾಶಕಿ ಸಂಧ್ಯಾ ರಾಣಿ ಉಪಸ್ಥಿತರಿದ್ದರು.