

ಬೆಂಗಳೂರು: ನಿಗಮ, ಮಂಡಳಿ ನೇಮಕ ವಿಷಯದಲ್ಲಿ ಕಾರ್ಯಕರ್ತರನ್ನು ಕಡೆಗಣಿಸದಂತೆ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸೂಚನೆಯೇ ಪಟ್ಟಿ ಪ್ರಕಟಣೆ ತಡವಾಗಲು ಕಾರಣವಾಗಿದ್ದು, ಶನಿವಾರ ಪ್ರಕ್ರಿಯೆ ಅಂತಿಮಗೊಳಿಸಬೇಕೆಂಬ ಕಾಲಮಿತಿ ಹಾಕಿಕೊಳ್ಳಲಾಗಿದೆ.
ಶಾಸಕರಿಗೆ ಆದ್ಯತೆ ಮೇಲೆ ನಿಗಮ, ಮಂಡಳಿಗಳಲ್ಲಿ ಅವಕಾಶ ಕೊಡಬೇಕೆಂಬ ವಾದ ಬಲಗೊಂಡಿತ್ತು, ಪಟ್ಟಿಯೂ ಸಿದ್ಧವಾಗಿತ್ತು. ಇದೇ ವೇಳೆ ಕಾರ್ಯಕರ್ತರು, ಮುಖಂಡರು ಈ ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿ ಸಮಪಾಲು ಕೊಡಬೇಕು ಹಾಗೂ ತಡಮಾಡದೇ ನೇಮಕ ಮಾಡಬೇಕೆಂದು ದನಿ ಎತ್ತಿದ್ದರು.
ಈ ವಿಷಯ ಎಐಸಿಸಿ ಅಧ್ಯಕ್ಷರವರೆಗೂ ತಲುಪಿತ್ತು. ಶಾಸಕರಿಗಾದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು, ಅಧಿಕಾರ ಸಿಕ್ಕಿದೆ. ಕಾರ್ಯಕರ್ತರು ಚುನಾವಣೆಯಲ್ಲಿ ದುಡಿದಿದ್ದು ಅವರ ಶ್ರಮದಿಂದಲೂ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ. ಈಗ ಕಾರ್ಯಕರ್ತರನ್ನು ಕಡೆಗಣಿಸಿದರೆ ಬೇರೆ ಸಂದೇಶ ಹೋಗಲಿದೆ ಎಂಬ ಕೂಗು ಬಲವಾಗಿ ಕೇಳಿಬಂದಿತ್ತು.
ಅಂತಿಮವಾಗಿ ಶಾಸಕರೂ ಹಾಗೂ ಕಾರ್ಯಕರ್ತರಿಗೆ ಒಟ್ಟಿಗೆ ನಿಗಮ, ಮಂಡಳಿ ನೇಮಕ ಮಾಡುವುದೆಂದು ನಿರ್ಣಯವಾದರೂ ಅನುಪಾತ ಹಂಚಿಕೆ ಗೊಂದಲ ಶುರುವಾಯಿತು. ಶಾಸಕರ ವಲಯದಿಂದ ಹೆಚ್ಚಿನ ಕೂಗು ಕೇಳಿಬಂದ ಕಾರಣ ಪುನಃ ಕಾರ್ಯಕರ್ತರು ಸಭೆ ಸೇರಿ ತಮ್ಮ ಬೇಡಿಕೆಯನ್ನು ಪಕ್ಷದ ಅಧ್ಯಕ್ಷರ ಮುಂದೆ ಮಂಡಿಸಿದ್ದರು.
ಹಾಗೂ ಹೀಗೂ ಸಮಾನ ಅನುಪಾತದಲ್ಲಿ ಅವಕಾಶ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದರು. ಆದರೆ, ಶಾಸಕರಿಗೆ ನಿಗಮ, ಮಂಡಳಿ ಯಾವುದೆಂದು ನಿಶ್ಚಯವಾಗಿತ್ತಾದರೂ ಕಾರ್ಯಕರ್ತರ ಹೆಸರು ಅಂತಿಮಗೊಂಡರೂ ನಿಗಮ, ಮಂಡಳಿ ಯಾವುದೆಂದು ಅಂತಿಮವಾಗಿರಲಿಲ್ಲ. ಶುಕ್ರವಾರ ರಾತ್ರಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಅವಕಾಶ ಯಾರಿಗೆಂಬುದನ್ನು ಆಧಾರಿಸಿ ನಿಗಮ, ಮಂಡಳಿಯನ್ನು ಅಂತಿಮಗೊಳಿಸಲಿದ್ದಾರೆ.