

ಬಿಸಿನೆಸ್ ಅಂದ್ರೆ, ಅದೊಂದು ತರಹ ತೆಂಗಿನ ಮರ ಬೆಳೆಸಿದ ಹಾಗೆ. ಒಳ್ಳೇ ಬೀಜ ಬಿತ್ತುತ್ತೀರ, ನೀರು, ಗೊಬ್ಬರ ಚೆನ್ನಾಗೇ ಹಾಕ್ತೀರ. ಗಿಡದಲ್ಲಿ ಚಿಗುರು ಸಹ ಬಂದಿರುತ್ತೆ. ಆದರೆ ಬೇಲಿ ಹಾಕೋದನ್ನ ಮರೆತಿದ್ದೀರ ಅಥವಾ ಇವತ್ತು, ನಾಳೆ ಅಂತ ಕಾಲ ತಳ್ತಿದೀರ. ಮದುವೇನೊ ಮುಂಜೀನೋ ಇನ್ಯಾವುದೋ ಕೆಲಸಕಾರ್ಯಾನೋ ಅಡ್ಡ ಬರ್ತಿದೆ. ಇವೆಲ್ಲ ಮುಗಿದು ಬೇಲಿ ಕಡೆ ಗಮನ ಕೊಡೋ ವೇಳೆಗೆ ಹಸೂನೋ, ಎಮ್ಮೇನೊ ಬಂದು ಚಿಗುರನ್ನ ತಿಂದು ಹಾಕಿರುತ್ತೆ! ಆಗ ಮಾಡೋದೇನು? ನೀವು ಮತ್ತೆ ಮೊದಲಿಂದ ಗಿಡ ಬೆಳೆಸಬೇಕಾಗುತ್ತೆ.
ನಾವು ಜೀವನದಲ್ಲಿ ನಮ್ಮ ಗುರಿ ಏನೆಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು, ನಂತರ ಕಣ್ಕಾಪಿನ ಕುದುರೆ ಯಂತೆ ಅದರತ್ತಲೇ ನಿರಂತರ ಗಮನ ಇಟ್ಟಿರಬೇಕು. ನೀವು ರಾಜಕಾರಣಿಗಳನ್ನ ನೋಡಿರಬಹುದು; ಅವರು ಏನೇ ಮಾತಾಡಲಿ, ಏನೇ ಮಾಡಲಿ, ಯಾವಾಗಲೂ ವೋಟ್ಬ್ಯಾಂಕಿನತ್ತ ಒಂದು ಕಣ್ಣು ಇಟ್ಟೇ ಇರ್ತಾರೆ. ಹಾಗೇ ನೀವು ಕೋಟ್ಯಧಿಪತಿಯಾಗಲೇಬೇಕೂಂತ ಸಂಕಲ್ಪ ಮಾಡಿದ್ರೆ ರಾಜಕಾರಣಿ ಗಳಂತಿರಬೇಕು. ಅಯ್ಯೋ ಬಿಡಿ, ಆ ದುಡ್ಡೆಲ್ಲ ಯಾಕೆ ಬೇಕು, ನಾವು ಎಷ್ಟು ದಿವಸ ಇರ್ತೀವೋ ಅಷ್ಟು ದಿವಸ ಮಜವಾಗಿರೋಣ ಅನ್ನೋ ಧೋರಣೆ ಸಲ್ಲದು.
ಯಾಕೇಂದ್ರೆ, ಮಜವಾಗಿರೋಕೂ ಹಣ ಬೇಕು, ಆರೋಗ್ಯವಂತರಾಗಿರೋದಕ್ಕೂ ಹಣ ಬೇಕು; ಇದು ನಿಮಗೆ ಇಷ್ಟವಿರಲಿ, ಇಲ್ಲದಿರಲಿ ಇದು ಹಣದ ಪ್ರಪಂಚ. ಇದು ಕಾಲಧರ್ಮ. ಒಂದು ಕಾಲದಲ್ಲಿ ವೈದ್ಯರು, ಜ್ಯೋತಿಷಿಗಳು, ಅನ್ನ ಹಾಕೋವ್ರು ದುಡ್ಡೀಸ್ಕೋಬಾರ್ದು ಅಂತ ನಿಯಮಾನೇ ಇತ್ತು. ಆದರೆ ಇವತ್ತು ಒಂದೊಂದೂ ಲಕ್ಷಾಂತರ ರೂಪಾಯಿ ಗಳಿಸಿಕೊಡುವ ಉದ್ಯಮವಾಗಿ ಬೆಳೆದಿದೆ. ನಾನು ಯಾವುದನ್ನೂ ತಪು್ಪ ಅಂತ ಅನ್ನೋದಿಲ್ಲ. ಬೇಡಿಕೆಯಿದ್ದಂತೆ ಪೂರೈಕೆಯೂ ಬೆಳೀಬೇಕು; ಇದು ಅರ್ಥಶಾಸ್ತ್ರದ ಪಾಠ.
ಪ್ರಖ್ಯಾತ ತತ್ತ್ವಜ್ಞಾನಿ ಜಿಡ್ಡು ಕಷ್ಣಮೂರ್ತಿಯವರನ್ನು ಯಾರೋ ಒಮ್ಮೆ ಕೇಳಿದರಂತೆ, ‘ನಾಳೆ ನಿಮಗೆ ಮರಣ ಅಂತ ಗೊತ್ತಾದ್ರೆ ಇವತ್ತಿನ ಕಾರ್ಯಕ್ರಮದಲ್ಲಿ ಏನೇನು ಬದಲಾವಣೆ ಮಾಡ್ಕೊಳ್ತೀರಾ’ ಅಂತ. ‘ಏನೂ ಇಲ್ಲ, ಎಲ್ಲ ನಿರ್ಧರಿಸಿಕೊಂಡಿದ್ದ ಹಾಗೇ ನಡೆಯುತ್ತೆ’ ಅಂತ ನಿರ್ವಿಕಾರ ಚಿತ್ತದಿಂದ ಹೇಳಿದರಂತೆ ಜಿಡ್ಡುರವರು. ವಾಸ್ತವವಾಗಿ ತೊಂಬತ್ತನೇ ವಯಸ್ಸಿನಲ್ಲಿ ನಿಧನರಾಗೋವರೆಗೂ ದೇಶವಿದೇಶಗಳನ್ನು ಸುತ್ತುತ್ತ, ಭಾಷಣಗಳನ್ನು ಮಾಡುತ್ತ, ಜಿಜ್ಞಾಸುಗಳೊಂದಿಗೆ ತತ್ತ್ವಜ್ಞಾನದ ಬಗ್ಗೆ ರ್ಚಚಿಸುತ್ತ ಜೀವನ ನಡೆಸಿದರು. ಅಷ್ಟೇಕೆ, ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು ತಮ್ಮ ಕೊನೆಯ ದಿನದ ಬೆಳಗ್ಗೆ ದಿನಪತ್ರಿಕೆಯೊಂದರ ಪುರವಣಿಯಲ್ಲಿ ತಮ್ಮನ್ನು ಕುರಿತೇ ಬಂದಿದ್ದ ಲೇಖನ ಓದಿ, ಹಲವರಿಂದ ಅಭಿನಂದನೆ ಸ್ವೀಕರಿಸಿ, ಕಾಫಿ ಕುಡಿದು ನಿಧನರಾದರು. ನಮ್ಮ ಬದುಕು ಹೇಗಿರಬೇಕೆಂದರೆ, ನಾವು ಇನ್ನೂ ನೂರು ವರ್ಷ ಬದುಕುತ್ತೇವೆಂಬ ಭರವಸೆಯಿಂದಿರುವಂತಿರಬೇಕು. ಆದರೆ ಈ ಕ್ಷಣವೇ ಕೊನೆಯ ಘಳಿಗೆ ಬಂದಿತೆಂದರೆ ನಮ್ಮ ಕೆಲಸಗಳೆಲ್ಲವನ್ನೂ ಮುಗಿಸಿದ್ದು ಸಿದ್ಧರಾಗಿರಬೇಕು.
ಇದೇನಪ್ಪಾ, ‘ದುಡ್ಡು ಮಾಡುವುದು ಹೇಗೆ?’ ಎಂದು ಹೇಳದೆ, ಈ ಬರಡು ವೇದಾಂತವೆಲ್ಲ ನುಸುಳಿಕೊಂಡಿತಲ್ಲಾ ಎಂದು ಅಚ್ಚರಿಯಾಗುತ್ತಿದೆಯಾ? ಹೌದು, ನನ್ನ ಮುಖ್ಯ ಉದ್ದೇಶ ಈಗಾಗಲೇ ಒಮ್ಮೆ ಹೇಳಿದ ಹಾಗೆ ಕೋಟ್ಯಧಿಪತಿಯಾಗುವ ಹಾದಿಯಲ್ಲಿ ಎಂಥ ಕಠಿಣ ಸಮಸ್ಯೆ ಬಂದರೂ ನಿರ್ವಿಕಾರ ಚಿತ್ತದಿಂದ ಅದನ್ನೆದುರಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ನಿಮ್ಮನ್ನು ಸಿದ್ಧಪಡಿಸುವುದು. ಇದು ಚೆನ್ನಾಗಿ ಹದ ಮಾಡಿದ ಭೂಮಿಯಲ್ಲಿ ಬಿತ್ತನೆ ಮಾಡಿ ಒಮ್ಮೆ ನೀರು ಹಾಕಿದ ಕೂಡಲೇ ಪೈರು ಬೆಳೆದುಬರುವಂತೆ ಮಾಡುವ ತಂತ್ರ. ಈ ವೇಳೆಗೆ ನಿಮ್ಮ ಮನಸ್ಸು ಅಂಥ ಹದವನ್ನು ಮೈಗೂಡಿಸಿಕೊಳ್ಳುತ್ತಿದೆ ಅಂದುಕೊಂಡಿದ್ದೇನೆ. ಆಯಿತು, ತಾತ್ವಿಕ ಚರ್ಚೆ ಏನೇ ಆದರೂ ಸ್ವಲ್ಪ ಬೇಸರದ ವಿಷಯವೇ; ಅದಕ್ಕೇ ನಾನೀಗ ಕೇವಲ ಒಂದು ಕುತೂಹಲ, ಒಂದಿಷ್ಟು ಹಣದ ಪ್ರಶ್ನೆ- ಎರಡೂ ಸೇರಿ ತಮ್ಮ ಪ್ರವೃತ್ತಿಯದಲ್ಲದ ಮಾರಾಟದ ಕ್ಷೇತ್ರಕ್ಕಿಳಿದು ತಮ್ಮ ನಿರೀಕ್ಷೆಗೂ ಮೀರಿ ಹಣ ಗಳಿಸಿದ ನನ್ನ ಪತ್ರಕರ್ತ ಮಿತ್ರ ಸಿ. ಸೀತಾರಾಂರ ಸ್ವಾರಸ್ಯಕರ ಅನುಭವವೊಂದನ್ನು ಹೇಳುತ್ತೇನೆ.
ಸೀತಾರಾಂ ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಪುಸ್ತಕ ಭಂಡಾರದಲ್ಲಿದ್ದ ಅಮೆರಿಕದ ‘ದಿ ವರ್ಲ್ಡ್ ಬುಕ್ ಎನ್ಸೈಕ್ಲೋಪೀಡಿಯಾ’ ಎಂಬ ವಿಶ್ವಕೋಶವನ್ನು ಕುತೂಹಲದಿಂದ ಓದುತ್ತಿದ್ದರು. ಅದು ಸ್ವಾರಸ್ಯಕರವಾಗಿತ್ತು. ಅದನ್ನು ಕೊಳ್ಳಬೇಕೆಂದು ಆಸೆಪಟ್ಟು ಮಾರಾಟಗಾರರಿಗೆ ಬರೆದರು. ಆ ಕೃತಿಗೆ ಬೆಲೆ 500 ರೂಪಾಯಿಗಳಾಗಿತ್ತು. ಆ ಕಾಲಕ್ಕೆ ಅದು ಭಾರೀ ಮೊತ್ತವೇ ಸರಿ. ಇದು ತಮಗಾಗದು ಎಂದು ಅವರು ಆ ಆಸೆಯನ್ನು ಅಲ್ಲಿಗೇ ಕೈಬಿಟ್ಟರು.
ಹಲವು ವರ್ಷಗಳ ನಂತರ ‘ಕನ್ನಡಪ್ರಭ’ದ ಸಹಸಂಪಾದಕರಾಗಿದ್ದ ಸೀತಾರಾಂ ಮನೆಗೆ ಒಂದು ಸಂಜೆ ಅದೇ ಸಂಸ್ಥೆಯ ಪ್ರತಿನಿಧಿಯೊಬ್ಬರು ಬಂದು ಅವರಿಗೆ ಇಡೀ ಕೃತಿಯನ್ನು ಉಚಿತವಾಗಿ ಪಡೆಯುವ ಅವಕಾಶವಿದೆಯೆಂದು ಹೇಳಿದರು. ಅದು ಹೇಗೆಂದರೆ, ಅವರು 250 ರೂಪಾಯಿ ಮುಂಗಡ ಕೊಟ್ಟರೆ ತರಬೇತಿ ಕೊಡುವರು. ಆಗ ಪುಸ್ತಕಶ್ರೇಣಿಯ ಬೆಲೆ 7,500 ರೂಪಾಯಿ. ಒಂದು ಕಂತು ಮಾರಿದರೆ ಶೇಕಡ 10ರಂತೆ 750 ರೂಪಾಯಿ ಕಮಿಷನ್. ಹತ್ತು ಕಂತನ್ನು ಮಾರಿದರೆ ಇಡೀ 7,500 ರೂಪಾಯಿ ವಾಪಸು ಬಂದಹಾಗಾಯಿತು. ನಂತರವೂ ಬೇಕಾದರೆ ಪ್ರತಿನಿಧಿಯಾಗಿ ಕೆಲಸ ಮಾಡುತ್ತ ಇನ್ನಷ್ಟು ಹಣ ಗಳಿಸಬಹುದು.
ಸೀತಾರಾಂ ಕೂಡಲೇ ಒಪ್ಪಿಕೊಂಡರು. ಇದಕ್ಕೆ ಕಾರಣಗಳಿದ್ದವು. ಮೊದಲನೆಯದು, ಆ ಮಾರಾಟ ತರಬೇತಿ ಹೇಗಿರುತ್ತದೋ ಎಂಬ ಕುತೂಹಲ. ಎರಡನೆಯದು, ಅಕಸ್ಮಾತ್ ಒಂದು ಸೆಟ್ ಮಾರಿದರೂ 750 ರೂಪಾಯಿ ಕಮಿಷನ್ ದೊರೆತರೆ ಖರ್ಚು ಮಾಡಿದ ಹಣ ಬರುತ್ತದಲ್ಲಾ ಎಂಬ ನಿರೀಕ್ಷೆ.
ತರಬೇತಿ ಕಾರ್ಯಕ್ರಮ ಮಾರುಕಟ್ಟೆ ತರಬೇತಿ ಮತ್ತು ಶಿಕ್ಷಣದಂತೆಯೇ ಅದ್ಭುತವಾಗಿತ್ತು. ನಂತರ ಅವರು ಈ ಪುಸ್ತಕ ಅಗತ್ಯವಾಗುವ ಎಳೆಯರಿರುವ, ಸಾಧ್ಯವಿದ್ದಲ್ಲಿ ಗಂಡ-ಹೆಂಡತಿ ಇಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರಲ್ಲಿ ಆಸಕ್ತಿಯಿರುವ, ಸ್ವತಃ ಪುಸ್ತಕಪ್ರೇಮಿಗಳಾಗಿರುವ-ತಮಗೆ ಸಾಕಷ್ಟು ಪರಿಚಯವಿರುವ ನೂರು ಮಂದಿಯ ಪಟ್ಟಿಯನ್ನು ಮಾಡಿದರು. ಈ ಪಟ್ಟಿಯನ್ನು ಸರಿಯಾಗಿ ಆಲೋಚಿಸಿ ಮಾಡಿದರೆ 25% ಯಶಸ್ಸು ಖಂಡಿತ. ಯಾಕೆಂದರೆ, ಸಂಸ್ಥೆಯ ವಿಶ್ವದಾಖಲೆ ಪ್ರಕಾರ ಪ್ರತಿ ಐದು ಸಮಂಜಸ ಭೇಟಿಗೆ ಒಂದು ಕಂತು ವ್ಯಾಪಾರ ಗ್ಯಾರಂಟಿ. ನಾವು ಒಬ್ಬರನ್ನು ಸಂದರ್ಶಿಸಿದರೆ ಪುಸ್ತಕ ಮಾರಾಟವಾಗಲಿ ಬಿಡಲಿ 250 ರೂಪಾಯಿ ಗಳಿಸಿದಂತೆ. ಏಕೆಂದರೆ, ಮೊದಲ ಐದು, ಹತ್ತು ಸಂದರ್ಶನಗಳಲ್ಲಿ ಒಂದು ಪುಸ್ತಕವೂ ಮಾರಾಟವಾಗಲಿಲ್ಲ ಎಂದುಕೊಳ್ಳಿ; ಆಗ ಮುಂದಿನ ಐದು ಸಂದರ್ಶನಗಳಲ್ಲಿ ಮೂರು ಕಂತಿನ ಮಾರಾಟ ಗ್ಯಾರಂಟಿ. ಇದೊಂದು ರೀತಿಯ ದೈವನಿಯಮದಂತೆ. ಹೇಳಿದರೆ ನಂಬಲಿಕ್ಕೇ ಸಾಧ್ಯವಾಗದಿರಬಹುದು; ಆದರೆ ಸೀತಾರಾಂ ಒಟ್ಟು ಸಾವಿರ ಸೆಟ್ ಮಾರಿ ಒಟ್ಟು 7,50,000 ರೂಪಾಯಿ ಗಳಿಸಿದರು. ಸೀತಾರಾಂ ಹೇಳುವಂತೆ ಒಂದೊಂದು ಸೆಟ್ ಮಾರಾಟವಾದಂತೆಯೂ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತಿತ್ತು. ಅದು ನಿಜವೇ, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾದಷ್ಟೂ ಕೆಲಸಗಳು ಸುಲಭವಾಗುತ್ತವೆ. ಎಲ್ಲ ಕೆಲಸಕ್ಕೂ ಆತ್ಮವಿಶ್ವಾಸವೇ ಮುಖ್ಯ ಎಂಬುದು ನೆನಪಿನಲ್ಲಿ ಇರಲಿ.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)