

ಕಾರ್ಕಳ: ಪ್ರಸ್ತುತ ರಾಜ್ಯ ಸರ್ಕಾರದ ದಿಸೆಯಿಂದ ಜನರ ಸೇವೆ ಮಾಡುವ ಬದಲು ಅವರಿಂದ ಬೈಸಿಕೊಳ್ಳುವ ಪರಿಸ್ಥಿತಿ ನಮಗೆ ಬಂದೊದಗಿದೆ. ಈ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಜನಸಾಮಾನ್ಯರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಬಡವರು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಕಳ ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಸಂತೋಷ್ ಶೆಟ್ಟಿ ಹಿರ್ಗಾನ ಹೇಳಿದರು.
9/11 ಸಮಸ್ಯೆ ಹಾಗೂ ಕಟ್ಟಡ ನಿರ್ಮಾಣ ಪರವಾನಗಿ ಸಮಸ್ಯೆಯನ್ನು ವಿರೋಧಿಸಿ ಗುರುವಾರ ಕಾರ್ಕಳದ ರಾಮಮಂದಿರದಲ್ಲಿ ಆಯೋಜಿಸಿದ್ದ ಕಾರ್ಕಳ ತಾಲೂಕು ಗ್ರಾಪಂ ಒಕ್ಕೂಟದ ಖಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ 9/11 ನೀಡುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಿದೆ. ಇದರಿಂದಾಗುವ ಪರಿಣಾಮವನ್ನು ಅವಲೋಕಿಸದೆ ನೇರವಾಗಿ ಸರ್ಕಾರ ಪ್ರಾಧಿಕಾರಕ್ಕೆ ನೀಡಿರುವುದು ಸರಿಯಲ್ಲ. ಕಾರ್ಕಳ ತಾಲೂಕಿನಲ್ಲಿ ಪ್ರಾಧಿಕಾರದ ವ್ಯವಸ್ಥೆಯಿಲ್ಲದ ಕಾರಣದಿಂದಾಗಿ 9/11, ನಕ್ಷೆ ಅನುಮೋದನೆಗಾಗಿ ಕಾಪು ಪ್ರಾಧಿಕಾರಕ್ಕೆ ಹೋಗುವಂತಾಗಿದೆ. ಉಡುಪಿ, ಕಾಪು, ಕಾರ್ಕಳ ತಾಲೂಕಿನವರೆಲ್ಲರೂ 9/11ಗಾಗಿ ಕಾಪು ಪ್ರಾಧಿಕಾರ ಒಂದಕ್ಕೆ ಅವಲಂಬಿತರಾಗಿರುವುದರಿಂದ, ಅಲ್ಲದೆ ಈ ಮೂರು ಕಡೆಗೂ ಒಂದೇ ಅಧಿಕಾರಿ ಇರುವುದರಿಂದ ಕಳೆದ ಏಳೆಂಟು ತಿಂಗಳುಗಳಿಂದ ನಮ್ಮ ತಾಲೂಕಿನಲ್ಲೇ 700 ಅರ್ಜಿಗಳು ಬಾಕಿಯಿದೆ ಎಂದು ಆರೋಪಿಸಿದರು.
ಗ್ರಾಪಂ ಒಕ್ಕೂಟದ ಕಾನೂನು ಸಲಹೆಗಾರ ಸೂರಜ್ ಜೈನ್ ಉಪಸ್ಥಿತರಿದ್ದರು. ಮರ್ಣೆ ಗ್ರಾ.ಪಂ. ಸದಸ್ಯ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಎರ್ಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸದಸ್ಯರ ಒಕ್ಕೂಟದ ಕಾರ್ಯದರ್ಶಿ ಸತೀಶ್ ಪೂಜಾರಿ ಎಳ್ಳಾರೆ ವಂದಿಸಿದರು. ಸಭೆಯಲ್ಲಿ ತಾಲೂಕಿನ ವಿವಿಧ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.
ಸರ್ಕಾರದ ಈ ವ್ಯವಸ್ಥೆಯಿಂದಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಾಮಾನ್ಯ ಜನತೆ ಈ ಎಲ್ಲ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗದೆ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದು ಅವರಿಗೆ ಲಕ್ಷಾಂತರ ರೂ.ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. 9/11 ಸಮಸ್ಯೆ ಬಂದಾಗಲೇ ಮಧ್ಯವರ್ತಿಗಳ ಹಾವಳಿ ಪ್ರಾರಂಭವಾಗಿತ್ತು. ಇದೀಗ ಮನೆ ನಿರ್ಮಾಣದ ಪರವಾನಗಿಗಾಗಿ ಜನ ಅಲೆದಾಡುವಂತಾಗಿದ್ದು ಮಧ್ಯವರ್ತಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆ ಪರಿಹಾರವಾಗಬೇಕಾದರೆ ಮೊದಲಿದ್ದಂತೆ ಈ ಎಲ್ಲ ಅಧಿಕಾರವನ್ನು ಪಂಚಾಯಿತಿಗೆ ನೀಡಬೇಕು. ಅಲ್ಲದೆ ಈ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಸರಳೀಕರಣಗೊಳಿಸಬೇಕು ಎಂದು ಕಾರ್ಕಳ ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೇಳಿದರು.