

ಉಳ್ಳಾಲ: ಶೈಕ್ಷಣಿಕ ಜೀವನದಲ್ಲಿ ಶಿಸ್ತು, ಸಮಯಪಾಲನೆ ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಂಡಾಗ ಮುಂದಿನ ಜೀವನ ಬಂಗಾರವಾಗುತ್ತದೆ ಎಂದು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್ ಹೇಳಿದರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಗೆ ಉಚಿತವಾಗಿ ನೀಡಲ್ಪಟ್ಟ ಕಂಪ್ಯೂಟರ್ ಬುಧವಾರ ಹಸ್ತಾಂತರಿಸಿ ಮಾತನಾಡಿದರು.
ಕಲಿಸಿದ ಶಿಕ್ಷಕರ ಶ್ರಮ ಸದಾ ನೆನಪಿನಲ್ಲಿಡಬೇಕು. ಗುರು, ಹಿರಿಯರಿಗೆ ಗೌರವ ನೀಡುವ ಗುಣ ಇದ್ದಲ್ಲಿ ಭವಿಷ್ಯ ಉತ್ತಮವಾಗುತ್ತದೆ. ಮಾತ್ರವಲ್ಲದೆ ಜೀವನದಲ್ಲಿ ಯಶಸ್ಸು ಸಿಗುವುದರಲ್ಲಿ ಸಂಶಯ ಇಲ್ಲ ಎಂದು ತಿಳಿಸಿದರು.
ಶಾಲಾ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕುಮುದಾದೇವಿ, ಕೃಷ್ಣ ಶಾಸ್ತ್ರಿ, ಶಿವಕುಮಾರ್, ಸ್ಮಿತಾ, ಶಾಲಾ ನಾಯಕಿ ಫಾತಿಮ ರಫೀದ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಶಿಕ್ಷಕ ರವಿಶಂಕರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.