

ಬಂಟ್ವಾಳ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ತುಂಬೆ ಗ್ರಾಮ ಸೇರಿದಂತೆ ಪುದು ಮತ್ತು ಮೇರಮಜಲು ಗ್ರಾಮ ವ್ಯಾಪ್ತಿಯಲ್ಲಿ ಶೀಘ್ರವೇ ಜನಸಂಪರ್ಕ ಸಭೆ ನಡೆಯಲಿದೆ.
ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡುವುದರ ಜತೆಗೆ ಸ್ಥಳೀಯ ಪಿಡಿಒ ಮತ್ತು ಗ್ರಾಮಾಡಳಿತ ಅಧಿಕಾರಿಗಳು ಅರ್ಜಿ ಸ್ವೀಕರಿಸಿ ಪ್ರತಿದಿನ ತಹಶೀಲ್ದಾರರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ವಿವಿಧ ಇಲಾಖಾಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ಬಂದು ವರದಿ ಒಪ್ಪಿಸಬೇಕು ಎಂದು ಮಂಗಳೂರು ಸಹಾಯಕ ಕಮಿಷನರ್ ಹರ್ಷವರ್ಧನ್ ಹೇಳಿದರು.
ಬಿ.ಸಿ.ರೋಡ್ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಉಪತಹಸೀಲ್ದಾರ್ ನರೇಂದ್ರನಾಥ, ದಿವಾಕರ ಮುಗುಳ್ಯ ಪಡ್ಜಾಲು, ಕಂದಾಯ ನಿರೀಕ್ಷಕ ವಿಜಯ ಮತ್ತಿತರರು ಇದ್ದರು. ಉಪತಹಸೀಲ್ದಾರ್ ಶಿವಪ್ರಸಾದ್ ವಂದಿಸಿದರು.