WCL ಟ್ರೋಫಿ ಗೆದ್ದು ವಿಚಿತ್ರವಾಗಿ ಸಂಭ್ರಮಿಸಿದ ಯುವಿ, ಭಜ್ಜಿ, ರೈನಾ ವಿರುದ್ಧ ದೂರು ದಾಖಲು; ಕಾರಣ ಹೀಗಿದೆ

Team India
Published on

ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ವರ್ಲ್ಡ್​ ಚಾಂಪಿಯನ್ಸ್​ ಲೀಗ್​ ಟೂರ್ನಿಯಲ್ಲಿ ಯುವರಾಜ್​ ಸಿಂಗ್​ ನೇತೃತ್ವದ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಸಾಂಪ್ರದಾಯಿಕ ಎದುರಾಳಿಗೆ ಮತ್ತೊಮ್ಮೆ ಮಣ್ಣು ಮುಕ್ಕಿಸುವಲ್ಲಿ ಭಾರತ ಯಶಸ್ವಿಯಾಗಿದ್ದು, ಇದನ್ನು ಆಟಗಾರರು ಬೇರೆ ರೀತಿಯಲ್ಲಿ ಸಂಭ್ರಮಿಸಿದ್ದರು. ಆದರೆ, ಈ ಸಂಭ್ರಮಾಚರಣೆ ಇವರ ಪಾಲಿಗೆ ಮುಳುವಾಗಿದೆ.

ಪಾಕಿಸ್ತಾನ ವಿರುದ್ಧದ ಗೆಲುವಿನ ನಂತರ ಟೀಮ್​ ಇಂಡಿಯಾ ಆಟಗಾರರಾದ  ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ವಿಭಿನ್ನ ರೀತಿಯಲ್ಲಿ ಸಂಭ್ರಮಾಚಣೆ ಮಾಡಿದರು. ಅವರ ಸಂಭ್ರಮಾಚರಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಸಂಭ್ರಮಾಚರಣೆ ಹಿಂದಿನ ಅರ್ಥ ಗೊತ್ತಿಲ್ಲದಿದ್ದರೂ, ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಗಿ ಈ ವಿಡಿಯೋ ಮಾಡಲಾಗಿತ್ತು. ಫೈನಲ್ ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಸಂಭ್ರಮಾಚರಣೆ ಮುಗಿಸಿ, ಡ್ರೆಸ್ಸಿಂಗ್ ರೂಂಗೆ ಮರಳಿದಾಗ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ಅವರು ಪೆಟ್ಟು ತಿಂದ ಮುದುಕರಂತೆ ಬಾಗಿಲು ತೆಗೆದುಕೊಂಡು ನಡೆದು ಬಂದರು. ಈ ವಿಡಿಯೋ ಸಖತ್​ ವೈರಲ್​ ಆಗಿತ್ತು.

ಇದೀಗ ವಿಡಿಯೋಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಂಗವಿಕಲರ ಉದ್ಯೋಗ ಉತ್ತೇಜನ ಮಂಡಳಿಯ (NCPEDP) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ದೂರು ದಾಖಲಿಸಿದ್ದಾರೆ. ನವದೆಹಲಿಯ ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಅಂಗವಿಕಲರಿಗೆ ಅವಮಾನ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅರ್ಮಾನ್​ ಅಲಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ 10 ಕೋಟಿಗೂ ಹೆಚ್ಚು ಅಂಗವಿಕಲರನ್ನು ಅವಮಾನಿಸಿ ತಮಾಷೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ವಿಕಲಚೇತನರನ್ನು ಅವಮಾನಿಸುವಂತಹ ವಿಡಿಯೋ ಇದ್ದರೂ ಇನ್​ಸ್ಟಾಗ್ರಾಮ್​ನಲ್ಲಿ ನಿರ್ಬಂಧಿಸಲಾಗಿಲ್ಲ. ಹೀಗಾಗಿ ಮೆಟಾ ಕಂಪೆನಿ ವಿರುದ್ಧ ಕೂಡ ದೂರು ನೀಡಿದ್ದೇನೆ.

ಹರ್ಭಜನ್ ಸಿಂಗ್ ಅವರು ಸಂಸದರು. ಅವರು ಅಂಗವಿಕಲರ ಪರವಾಗಿ ಧ್ವನಿ ಎತ್ತಬೇಕು. ಆದರೆ ಅವರು ಯಾವ ರೀತಿಯ ವಿಡಿಯೋವನ್ನು ಮಾಡುತ್ತಿದ್ದಾರೆ. ನೋಡ ಭಾರತದಲ್ಲಿ, ವಿಕಲಾಂಗತೆಗಳ ಬಗ್ಗೆ ಅರಿವಿನ ತೀವ್ರ ಕೊರತೆಯಿದೆ. ಯಾವಾಗಲೂ ವಿಕಲಚೇತನರನ್ನು ತಮಾಷೆಯ ಭಾಗವಾಗಿ ಗೇಲಿ ಮಾಡುತ್ತೀರುತ್ತೀರಿ. ಇವೆಲ್ಲವೂ ನಿಲ್ಲಬೇಕೆಂಬುದು ನನ್ನ ಆಶಯ. ಹೀಗಾಗಿ ದೂರು ದಾಖಲಿಸಿದ್ದೇನೆ ಎಂದು ಅರ್ಮಾನ್ ಅಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net