ಕಾಸರಗೋಡು: ಆಘಾತಕಾರಿ ಘಟನೆಯೊಂದರಲ್ಲಿ ಮಕ್ಕಳು ತಾಯಿಯನ್ನು ಕೊಂದು ಆಕೆಯ ಶವವನ್ನು ನೇಣು ಹಾಕಿ ಆತ್ಮಹತ್ಯೆ ಎಂದು ನಾಟಕವಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ಚೇಪನಡುಕದ ಪುಕ್ಲತ್ ಅಮ್ಮಾಳುವಮ್ಮ (68) ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಮ್ಮಾಳುವಮ್ಮನ ಮಕ್ಕಳು ತಮ್ಮ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಮುಂದೆ ಗೋಳಾಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮಕ್ಕಳ ಕಳ್ಳಾಟ ಬಯಲಾಗಿದ್ದು, ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕಾಸರಗೋಡಿನ ಚೇಪನಡುಕದ ನಿವಾಸಿಯಾದ ಅಮ್ಮಾಳುವಮ್ಮನವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮಗೆ ಕರೆ ಬಂತು. ಕೂಡಲೇ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರನೋತ್ತರ ಪರೀಕ್ಷೆಗೆ ರವಾನಿಸಿದೆವು. ಮರಣೋತ್ತರ ಪರೀಕ್ಷೆ ವೇಳೆ ಆ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಕಂಡು ಬಂದಿದೆ.
ವಿಧಿವಿಜ್ಞಾನ ಇಲಾಖೆಯವರು ಆ ಮಹಿಳೆ ವಾಸವಿದ್ದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. . ಅವರು ನೇಣು ಬಿಗಿದ ಸ್ಥಿತಿಯನ್ನು ಗಮನಿಸಿದ ಅವರು ನೇಣು ಬಿಗಿದುಕೊಂಡ ರಾಡ್ ಆಕೆಯ ದೇಹದ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳಿದ್ದರು. ಮೃತದೇಹ ನೆಲದ ಮೇಲೆ ಬಿದ್ದಿದ್ದು, ತಲೆ ವಾಲಿರುವುದು ಕೂಡ ಆತ್ಮಹತ್ಯೆಯಲ್ಲ ಎಂದು ತಿಳಿದು ಬಂದಿತ್ತು. ಈ ವರದಿಯಿಂದಾಗಿ ಆ ಮಹಿಳೆಯನ್ನು ಮಕ್ಕಳೇ ಕೊಂದಿರುವ ಸಂಗತಿ ಬೆಳಕಿಗೆ ಬಂದಿದೆ.
ಕೂಡಲೇ ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೀಡಾದ ಮಹಿಳೆ ತನ್ನ ಅಜ್ಜಿಯ ಹೆಸರಿನಲ್ಲಿದ್ದ 70 ಸೆಂಟ್ಸ್ ಜಾಗವನ್ನು ಮಾರಾಟ ಮಾಡಿ ಮತ್ತೊಂದು ಜಮೀನು ಖರೀದಿಸಿದ್ದರು. ಅದನ್ನು ಅವರ ಮಗ ಮತ್ತು ಹೆಂಡತಿಯ ಹೆಸರಿನಲ್ಲಿ ನೋಂದಾಯಿಸಲು ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಜಗಳ ನಡೆದಿತ್ತು. ಇದೇ ಜಗಳ ಕೊಲೆಗೆ ಕಾರಣವಾಗಿದೆ. ಮಲಗಿದ್ದ ತಾಯಿಯನ್ನು ಕೈಗಳಿಂದ ಕತ್ತು ಹಿಸುಕಿ, ಮುಖಕ್ಕೆ ದಿಂಬು ಬಿಗಿದು ಕುತ್ತಿಗೆಗೆ ನೈಲಾನ್ ಹಗ್ಗ ಸುತ್ತಿ ಉಸಿರುಗಟ್ಟಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಕತ್ತು ಹಿಸುಕಿ ಸಾಯಿಸುವಾಗ ತಾಯಿಯ ಬಾಯಿ ಮತ್ತು ಮೂಗಿನಿಂದ ರಕ್ತ ಸುರಿಯುತ್ತಿತ್ತು. ಇದನ್ನೂ ಆರೋಪಿಗಳು ಒರೆಸಿ ಬಳಿಕ ಶವವನ್ನು ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಿ ಪರಾರಿಯಾಗಲು ಯತ್ನಿಸಿದ್ದರು. ಈ ವಿಚಾರ ಪೊಲೀಸ್ ಹಾಗೂ ವಿಧಿವಿಜ್ಞಾನದ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.