

ಮುಂಬೈ: ಹಿಂದೂಗಳ ಪವಿತ್ರ ಹಬ್ಬ ಹೋಳಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಾಲಿವುಡ್ ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ನಿರ್ದೇಶಕಿ ಫರಾ ಖಾನ್( Farah Khan) ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಿಂದೂಸ್ತಾನಿ ಭಾವು ಎಂದೇ ಪ್ರಸಿದ್ಧರಾದ ವಿಕಾಸ್ ಪಾಠಕ್ ಅವರು ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ಈ ದೂರು ದಾಖಲಿಸಿದ್ದಾರೆ.
ಫೆಬ್ರವರಿ 20ರಂದು(ಗುರುವಾರ) ಸೆಲೆಬ್ರಿಟಿ ಮಾಸ್ಟರ್ಶೆಫ್ ಫರಾ ಕಾರ್ಯಕ್ರಮವೊಂದರಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಗಾಗಿ ಕಾನೂನು ಕ್ರಮಕೈಗೊಳ್ಳುವಂತೆ ಕೋರಿ ಶುಕ್ರವಾರ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫರಾ ಖಾನ್ ಅವರ ಹೇಳಿಕೆಯು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದೆ ಎಂದು ನನ್ನ ಕಕ್ಷಿದಾರರು ಹೇಳುತ್ತಾರೆ. ಪವಿತ್ರ ಹಬ್ಬವನ್ನು ವಿವರಿಸಲು ಛಾಪ್ರಿ ಪದವನ್ನು ಬಳಸುವುದು ಅತ್ಯಂತ ಅನುಚಿತವಾಗಿದೆ ಮತ್ತು ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಪಾಠಕ್ ಪರ ವಕೀಲ ದೇಶಮುಖ್ ತಿಳಿಸಿದ್ದಾರೆ.
ದೂರಿನಲ್ಲಿ ಫರಾಹ್ ಹೋಳಿಯನ್ನು 'ಛಪ್ರಿಯಾ ಕಾ ಫೆಸ್ಟಿವಲ್' ಎಂದು ಕರೆದಿದ್ದಾರೆ. ಇದು ಅವಹೇಳನಕಾರಿ ಪದವಾಗಿದೆ ಎಂದು ಉಲ್ಲೇಖಿಸಲಾಗಿದೆ. ಫರಾ ಖಾನ್ ಅವರ ಹೇಳಿಕೆಗಳು ಅವರ ವೈಯಕ್ತಿಕ ಧಾರ್ಮಿಕ ಭಾವನೆಗಳು ಮತ್ತು ದೊಡ್ಡ ಹಿಂದೂ ಸಮುದಾಯದ ಭಾವನೆಗಳನ್ನು ತೀವ್ರವಾಗಿ ನೋಯಿಸಿವೆ ಎಂದು ವಿಕಾಸ್ ಪಾಠಕ್ ತಿಳಿಸಿದ್ದಾರೆ.
ಸೆಲೆಬ್ರಿಟಿ ಮಾಸ್ಟರ್ ಶೆಫ್ ಆದ ಬಾಲಿವುಡ್ ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೋಳಿ ಹಬ್ಬದ ಬಗ್ಗೆ ಕಾಮೆಂಟ್ ಮಾಡಿರುವ ಫರಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.(ಏಜೆನ್ಸೀಸ್)