ಹಾಲಿ, ಮಾಜಿ ಶಾಸಕರ ಮೇಲೆ ದೂರು, ಪ್ರತಿದೂರು ದಾಖಲು!

Lingasagur
Published on

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸಗೂರು ಹಾಲಿ ಶಾಸಕ ಡಿ.ಎಸ್.ಹೂಲಗೇರಿ ಮತ್ತು ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ನಡುವಿನ ವೈಮನಸ್ಯ ತಾರಕಕ್ಕೇರಿದೆ. ಇದಕ್ಕೆ ನಿದರ್ಶನವೆಂಬಂತೆ ಜಿಲ್ಲೆಯ ಹಟ್ಟಿ ಪೊಲೀಸ್​ ಠಾಣೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳ ಮೇಲೆ ದೂರು, ಪ್ರತಿದೂರು ದಾಖಲಾಗಿದೆ.

ಇತ್ತೀಚೆಗೆ ಲಿಂಗಸಗೂರು ತಾಲೂಕಿನ ವಂದಲಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಭೂಮಿಪೂಜೆ ವೇಳೆ ಕೈ ಹಾಗೂ ಕಮಲದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು. ಶಾಸಕ ಡಿ.ಎಸ್.ಹೂಲಗೇರಿ ಅವರ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಈ ಸಂದರ್ಭದಲ್ಲಿ ಮಾನಪ್ಪ ವಜ್ಜಲ್ ಅವರ ಪ್ರಚೋದನೆಯಿಂದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾಗಿ ಅವರನ್ನು ಶಾಸಕ ಹೂಲಗೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದ್ದು, ಹೂಲಗೇರಿ ವಿರುದ್ದ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿನ್ನೆಯ ದಿನ ಮಾಜಿ ಶಾಸಕ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್ ವಿರುದ್ದವೂ ಪ್ರತಿದೂರು ದಾಖಲಾಗಿದೆ. ಲಿಂಗಸಗೂರು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಭೂವನಗೌಡ ಪಾಟೀಲ ಅವರು, ಮಾಜಿ ಶಾಸಕ ಮಾನಪ್ಪ ವಜ್ಜಲ್ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಜೀವ ಬೆದರಿಕೆ ಹಾಕಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net