ಮೂಲ್ಕಿ: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜನ್ಮದಿನಾಚರಣೆ, ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ, ರುಕ್ಕರಾಮ ಸಾಲ್ಯಾನ್ ಸಭಾಗೃಹ ಲೋಕಾರ್ಪಣೆ ಮತ್ತು ವಿದ್ಯಾರ್ಥಿವೇತನ ವಿತರಣೆ ಆ.19ರಿಂದ 20ರವರೆಗೆ ನಡೆಯಲಿದೆ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಕಾರ್ಯದರ್ಶಿ ಮೂಲ್ಕಿ ಚಂದ್ರಶೇಖರ ಸುವರ್ಣ ಹೇಳಿದರು.
ಮೂಲ್ಕಿ ಬಿಲ್ಲದ ಸಮಾಜ ಸೇವಾ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯ ಕುಮಾರ್ ಕುಬೆವೂರು ಮಾತನಾಡಿ, ಆ.19ರಂದು ಬೆಳಗ್ಗೆ 6.45ಕ್ಕೆ ಭಜನಾ ಜ್ಯೋತಿ ಉದ್ಘಾಟನೆ, ಭಜನೆ, ರಾತ್ರಿ 8ಕ್ಕೆ ಭಜನಾ ಮಂಗಲೋತ್ಸವ ನಡೆಯಲಿದೆ. 20ರಂದು ಸಮುದಾಯ ಭವನ ಹಾಗೂ ರುಕ್ಕರಾಮ ಸಾಲ್ಯಾನ್ ಸಭಾಗೃಹ ಲೋಕಾರ್ಪಣೆ ಮತ್ತು ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ. ಸಮುದಾಯ ಭವನವನ್ನು ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸುವರು. ಶ್ರೀ ರುಕ್ಕರಾಮ ಸಾಲ್ಯಾನ್ ಸಭಾಗೃಹವನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿರುವರು ಎಂದರು.
ಕಟ್ಟಡ ಸಮಿತಿಗೆ ಅಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನ ಹೊಂದಿದ ವಿಠಲ ಅಮೀನ್ಗೆ ಮರಣೋತ್ತರವಾಗಿ ‘ಬಿಲ್ಲವರತ್ನ’ ಪ್ರಶಸ್ತಿ ನೀಡಲಾಗುವುದು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ವಿದ್ಯಾರ್ಥಿವೇತನ, ವಿ.ಪ. ಸದಸ್ಯ ಹರಿಪ್ರಸಾದ್ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಹಾಗೂ ಎನ್.ಆರ್.ಮೂಲ್ಕಿ ಸ್ಮರಣಾರ್ಥ ವಿದ್ಯಾರ್ಥಿವೇತನವನ್ನು ಶಶಿಧರ್ ಕೋಟ್ಯಾನ್ ವಿತರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಸರೋಜಿನಿ ಸುವರ್ಣ, ನರೇಂದ್ರ ಕೆರೆಕಾಡು, ಗೌರವ ಪ್ರಧಾನ ಕಾರ್ಯದರ್ಶಿ, ಜಯಕುಮಾರ್ ಕುಬೆವೂರು ಕೋಶಾಧಿಕಾರಿ ಕಮಲಾಕ್ಷ ಬಡಗುಹಿತ್ಲು, ದಳಪತಿ ಶಂಕರ ಪಡುಬೈಲು, ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಯದೀಶ್ ಅಮೀನ್ ಮತ್ತಿತರರಿದ್ದರು.