

ಮಂಗಳೂರು: ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳು ಉಳಿಯಬೇಕು ಮತ್ತು ಗುರುಪರಂಪರೆಯಲ್ಲಿ ಮುಂದುವರಿಯಬೇಕು. ಶಾಸ್ತ್ರೀಯ ಕಲೆಗಳು ಭಾರತೀಯ ಸಂಸ್ಕೃತಿಯ ಬೇರು ಎಂದು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ ನೃತ್ಯಾಮೃತ -8 ಪದ್ಮ ಪಲ್ಲವ ವನ್ನು ಪುರಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಜನಾಂಗಕ್ಕೆ ಭಾರತೀಯತೆಯ ವೈಶಿಷ್ಯಪೂರ್ಣ ವಿಚಾರಧಾರೆ ತಿಳಿಸುವಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರದ ಮೂಲಕ ವಿದುಷಿ ಸುಮಂಗಲಾ ರತ್ನಾಕರ್ ರಾವ್ ರ ಸಾಧನೆ ಶ್ಲಾಘನೀಯ ಎಂದವರು ಹೇಳಿದರು.
ಯಕ್ಷಗಾನ ಕಲಾವಿದ ದುಬೈಯ ಶೇಖರ್ ಡಿ. ಶೆಟ್ಟಿಗಾರ್ ಮುಖ್ಯ ಅತಿಥಿಯಾಗಿದ್ದರು. ಅವರನ್ನು ಯು.ಎ.ಇಯಲ್ಲಿ ನಡೆಸುತ್ತಿರುವ ಶಿಸ್ತುಬದ್ಧ ಚೌಕಟ್ಟಿನಿಂದ ಕೂಡಿದ ತೆಂಕುತಿಟ್ಟು ಯಕ್ಷಗಾನದ ದಕ್ಷ ಗುರುತ್ವಕ್ಕೆ ಯಕ್ಷಾಭಿವಂದನಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಧರ್ಮಸ್ಥಳದ ಮಾಜಿ ಜಮಾ ಉಗ್ರಾಣ ಅಧಿಕಾರಿ ಭುಜಬಲಿ ಧರ್ಮಸ್ಥಳ, ದುಬೈ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಕೃಷ್ಣ ಪ್ರಸಾದ್ ರಾವ್, ಶಾರದಾ ನಾಟ್ಯಾಲಯ ಹೊಸಬೆಟ್ಟಿನ ವಿ.ಭಾರತಿ ಸುರೇಶ್, ಬಜ್ಪೆ ಅಂಚೆ ಕಚೇರಿಯ ಎಲ್.ಎಸ್.ಜಿ. ಪಿಎ ಶಶಿಕಲಾ ನಿತ್ಯಾನಂದ ಶೆಟ್ಟಿಗಾರ್, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ತಂತ್ರಜ್ಞೆ ವಿ.ಶ್ರೇಯಾ ಎಸ್. ಶೆಟ್ಟಿ ಹಾಗೂ ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಷ್ಟಿ ಬಿ. ರತ್ನಾಕರ ರಾವ್ ಶುಭ ಹಾರೈಸಿದರು.
ಉದ್ಘಾಟನೆಯ ಬಳಿಕ ಗುರು ವಿದುಷಿ ಸುಮಂಗಲಾ ರತ್ನಾಕರ್ ನಿರ್ದೇಶನ ಮತ್ತು ನಟುವಾಂಗದೊಂದಿಗೆ ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮ ಜರುಗಿತು. ಹಿಮ್ಮೇಳದಲ್ಲಿ ವಿ.ವಿದ್ಯಾಶ್ರೀ ರಾಧಾಕೃಷ್ಣ, ವಿ. ಸುರೇಶ್ ಬಾಬು ಕಣ್ಣೂರು, ವಿ. ರಾಜಗೋಪಾಲ್ ಕಾಂಞಂಗಾಡ್ ಸಹಕರಿಸಿದ್ದರು.
ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು, ವಿ.ಅನು ಧೀರಜ್ ಅಭಿನಂದನಾ ಪತ್ರ ವಾಚಿಸಿದರು. ವಿ. ಸುಮಂಗಲಾ ರತ್ನಾಕರ್ ರಾವ್ ವಂದಿಸಿದರು. ವಿ.ಭವ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.