

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬೆಳಪು ಹಾಲು ಉತ್ಪಾದಕರ ಸಂಘವು ಉತ್ತಮ ಲಾಭಾಂಶ ಹೊಂದಿ ಹೈನುಗಾರರ ಶ್ರೇಯೋಭಿವೃದ್ಧಿಗೆ ಬದ್ಧವಾಗಿದ್ದು, ಸದಸ್ಯರಿಗೆ ಪ್ರಸಕ್ತ ವರ್ಷ ಶೇ.25ರಷ್ಟು ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಘೋಷಿಸಿದರು.
ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದಲ್ಲಿ ಹಾಲು ಉತ್ಪಾದಕರ ಶೇಖರಣಾ ಘಟಕವಿದ್ದು, ಮುಂದೆ ಹೈನುಗಾರರಿಗೆ ಹಸುಗಳ ಮೇವು, ಹಿಂಡಿ, ಪೌಷ್ಟಿಕಾಂಶದ ಆಹಾರಕ್ಕೆ ಸಂಘವು ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು.
ಸಂಘದ ವ್ಯಾಪ್ತಿಯ ರೈತರು ಪಶು ಖರೀದಿಸಿದರೆ ಶೇ.3 ಬಡ್ಡಿ ದರದಲ್ಲಿ ಸಾಲ ಸೌಲಭ್ಯವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಸು ಖರೀದಿಸಲು ಇಚ್ಛಿಸಿದರೆ ಗ್ರಾ.ಪಂ ವತಿಯಿಂದ 10,000ರೂ. ಸಹಾಯಧನ ನೀಡಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.
ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ದೇವಿಪ್ರಸಾದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ಉಪವ್ಯವಸ್ಥಾಪಕ ಡಾ.ಮಾಧವ ಐತಾಳ, ವಿಸ್ತರಣಾಧಿಕಾರಿ ಅಬ್ದುಲ್ ಶಮೀರ್, ಸಂಘದ ಉಪಾಧ್ಯಕ್ಷ ಕೆ.ದಿನೇಶ್ ಶೆಟ್ಟಿ, ನಿರ್ದೇಶಕರಾದ ನರಸಿಂಹ ಜೆನ್ನಿ, ಚಂದ್ರಕಾಂತ ಶೆಟ್ಟಿ, ದಿನೇಶ್ ಪೂಜಾರಿ, ರಮೇಶ ದೇವಾಡಿಗ, ರಮಾನಂದ ಮೂಲ್ಯ, ದಿವಾಕರ ಶೆಟ್ಟಿ, ಗುರುರಾಜ ಆಚಾರ್ಯ, ಅಣ್ಣು ಮುಖಾರಿ, ಗೌರಿ ಶೆಟ್ಟಿ, ಶ್ರೀದೇವಿ ಪೂಜಾರಿ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಯಾದವ ರಾವ್ ಕಾರ್ಯಕ್ರಮ ನಿರೂಪಿಸಿದರು.