ಮೀನುಗಾರ ಮಹಿಳೆಯರಿಗೆ ತೊಂದರೆಯಾಗಲು ಬಿಡುವುದಿಲ್ಲ

15KWR1
Published on

ವಿಜಯವಾಣಿ ಸುದ್ದಿಜಾಲ ಕಾರವಾರ: ಒಂಬತ್ತು ಅಂಗಡಿಕಾರರ ಕಾರಣಕ್ಕಾಗಿ 500 ಕ್ಕೂ ಅಧಿಕ ಮೀನುಗಾರ ಮಹಿಳೆಯರಿಗೆ ಸಾವಿರಾರು ಗ್ರಾಹಕರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸ್ಪಷ್ಟ ಸಂದೇಶ ನೀಡಿದರು.

ಗಾಂಧಿ ಮಾರುಕಟ್ಟೆ ಸಮೀಪ ನೂತನ ಮೀನು ಮಾರುಕಟ್ಟೆ ಮೊದಲ ಹಂತದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಒಂಬತ್ತು ಅಂಗಡಿಕಾರರ ವೈಯಕ್ತಿಕ ಜಿದ್ದಿನ ಕಾರಣಕ್ಕಾಗಿ ಮೀನು ಮಾರುಕಟ್ಟೆಯ ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಯೋಜನೆಯಂತೆ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. 500 ರಷ್ಟು ಮೀನು ಮಾರಾಟ ಮಹಿಳೆಯರಿದ್ದರೂ ಕೇವಲ 180 ಜನರಿಗೆ ಮಾತ್ರ ಇಲ್ಲಿ ಕೂರಲು ವ್ಯವಸ್ಥೆ ಮಾಡಲು ಸಾಧ್ಯವಾಗಿದೆ.

ಯಾವುದೇ ಹಂತದಲ್ಲೂ ಅಂಗಡಿಕಾರರ ಹಾಗೂ ಮೀನುಗಾರರ ಹಿತರಕ್ಷಣೆಗೆ ಬದ್ಧವಾಗಿದೆ. ಅಂಗಡಿಕಾರರು ನ್ಯಾಯಾಲಯದಲ್ಲಿ ಹೂಡಿದ ದಾವೆ ಹಿಂಪಡೆದರೆ, ಕೊಟ್ಟ ಮಾತಿನಂತೆ, ನ್ಯಾಯಾಲಯದಲ್ಲಿ ಸಲ್ಲಿಸಿದ ಅಫಿಡವಿಟ್​ನಂತೆ ಇನ್ನು ಐದಾರು ತಿಂಗಳಲ್ಲಿ ಎರಡನೇ ಹಂತದ ಮೀನು ಮಾರುಕಟ್ಟೆಯಲ್ಲಿ ಅವರಿಗೆ ಟೆಂಡರ್ ರಹಿತವಾಗಿ 9 ಮಳಿಗೆಗಳನ್ನು ಮೀಸಲಿಡಲಾಗುವುದು. ಕೇವಲ ಹಣಕ್ಕಾಗಿ ಜಿದ್ದು ಮಾಡಿದರೆ ಸಮಾಜ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ಗಾಂಧಿ ಮಾರುಕಟ್ಟೆ ತೆರವು: ಹಳೆಯದಾಗಿರುವ ಗಾಂಧಿ ಮಾರುಕಟ್ಟೆ ತೆರವು ಮಾಡಿ ಹೊಸ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ವಣಕ್ಕೆ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ವಿವಿಧೆಡೆ ವ್ಯವಸ್ಥೆ: ನಿರ್ವಣಕ್ಕೂ ಪೂರ್ವ ನಡೆದ ಒಪ್ಪಂದದ ಸಮಯದಲ್ಲಿ ಹೆಸರು ನೋಂದಾಯಿಸಿದ ಮೀನುಗಾರ ಮಹಿಳೆಯರಿಗೆ ಮೊದಲ ಹಂತದ ಮೀನು ಮಾರುಕಟ್ಟೆ ಕಟ್ಟಡದಲ್ಲಿ ಅವಕಾಶ ಕಲ್ಪಿಸಲಾಗುವುದು. ಸಂಪೂರ್ಣ ಮಾರುಕಟ್ಟೆ ನಿರ್ವಣಕ್ಕೆ ಮೀಸಲಿಟ್ಟ ಇನ್ನೂ ಐದು ಕೋಟಿ ರೂ. ಉಳಿಕೆಯಾಗಿದ್ದು, ಇನ್ನೂ ಐದಾರು ತಿಂಗಳಲ್ಲಿ ಹೊಸ ಕಟ್ಟಡ ನಿರ್ವಿುಸುವ ವಿಶ್ವಾಸವಿದೆ. ಒಟ್ಟಾರೆ ಗರಿಷ್ಠ 500 ಮಹಿಳೆಯರಿಗೆ ಈ ಮಾರುಕಟ್ಟೆಯಲ್ಲಿ ವ್ಯಾಪಾರ ವ್ಯವಸ್ಥೆ ಕಲ್ಪಿಸಲು ಸಾಧ್ಯ. ಉಳಿದವರಿಗೆ ಶಾಸಕರ ನಿಧಿಯಲ್ಲಿ ಸದಾಶಿವಗಡ, ಕಡವಾಡ, ಸುಂಕೇರಿ ಹೀಗೆ ವಿವಿಧೆಡೆ ಮೀನು ಮಾರುಕಟ್ಟೆ ಕಟ್ಟಡದ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಎಸ್​ಪಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ವೇದಿಕೆಯಲ್ಲಿದ್ದರು. ಎಸಿ ಪ್ರಿಯಾಂಗಾ ಎಂ. ಸ್ವಾಗತಿಸಿದರು.

ಅಭಿವೃದ್ಧಿಗಾಗಿ ಸರ್ವ ಪಕ್ಷ ಸಭೆ

ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸರ್ವ ಪಕ್ಷಗಳ ಸಭೆ ಕರೆದು ರ್ಚಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ 96 ಎಕರೆ ಭೂಮಿ ಹಾಗೂ 67 ಮನೆಗಳಿಗೆ ಹಾನಿಯಾಗಲಿದೆ. ಮನೆ ಹಾಗೂ ಜಮೀನು ಕಳೆದುಕೊಳ್ಳುವ ಸಂತ್ರಸ್ತರನ್ನು ಸಂತೃಪ್ತಿಪಡಿಸಿ, ಪುನರ್ವಸತಿ ನೀಡಲು ಮೊದಲ ಆದ್ಯತೆ ನೀಡಲಾಗುವುದು. ಇದಕ್ಕೆ ನಾಯಕರು ರಾಜಕೀಯ ಮಾಡದೇ ಸಹಕಾರ ಮಾಡಬೇಕು. ಮಂಗಳೂರು, ಉಡುಪಿಯಂತೆ ಜಿಲ್ಲೆಯ ರಾಜಕೀಯ ಮುಖಂಡರೂ ಅಭಿವೃದ್ಧಿಗಾಗಿ ಒಟ್ಟಾಗಬೇಕು. ಈಗಾಗಲೇ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಹಾಗೂ ಆನಂದ ಅಸ್ನೋಟಿಕರ್ ಬೆಂಬಲ ನೀಡಿದ್ದಾರೆ. ಸತೀಶ ಸೈಲ್ ಅವರ ಬಳಿಯೂ ಮನವಿ ಮಾಡುತ್ತೇನೆ ಎಂದು ಹೇಳಿದರು.

ಸಂಭ್ರಮಾಚರಣೆ ಕೈಬಿಡಿ: ಗಣೇಶ ಚತುರ್ಥಿಯಲ್ಲಿ ಭಕ್ತಿಯ ಆಚರಣೆಗೆ ಮಹತ್ವ ನೀಡಿ, ಸಂಭ್ರಮಾಚರಣೆ ಕೈಬಿಡಿ ಎಂದು ಶಿವರಾಮ ಹೆಬ್ಬಾರ ಮನವಿ ಮಾಡಿದರು. ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ. ಮನೆ ಅಥವಾ ದೇವಸ್ಥಾನದಲ್ಲೂ ಎರಡೇ ದಿನ ಗಣಪತಿ ಇಡಬಹುದು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net