ಬೆಲೆ ಇಲ್ಲದಂತಾದ ಇಬುಡಲು ಹಣ್ಣು

25KWR7
Published on

ಅಂಕೋಲಾ: ಸೆಪ್ಟೆಂಬರ್ ಅಂತ್ಯದಲ್ಲೂ ಮಳೆ ಮುಂದುವರಿದ ಪರಿಣಾಮ ಅಂಕೋಲಾದಲ್ಲಿ ಬೆಳೆದ ಇಬುಡಲು ಹಣ್ಣಿಗೆ ಬೆಲೆಯೇ ಇಲ್ಲದಂತಾಗಿದೆ. ಇದರಿಂದ ಬೆಳೆಗಾರರು, ವ್ಯಾಪಾರಸ್ಥರು ಆತಂಕಿತರಾಗಿದ್ದಾರೆ.

ಮೊಗೆಕಾಯಿಯಂತೆಯೇ ಇರುವ ಈ ಹಣ್ಣನ್ನು ಹೊಸಗದ್ದೆ, ಬೆಳಸೆ, ಬೋಳೆ, ಬೇಳಾ ಸೇರಿದಂತೆ ಹಲವೆಡೆ ರೈತರು ಬೆಳೆಯುತ್ತಾರೆ. ಒಂದಕ್ಕೆ 50 ರಿಂದ 60 ರೂ.ವರೆಗೂ ಅಂಕೋಲಾ ಮಾರುಕಟ್ಟೆಯಲ್ಲಿ ವ್ಯಾಪಾರವಾಗುತ್ತಿತ್ತು. ಆದರೆ, ಈ ಬಾರಿ 30 ರೂಪಾಯಿಗೂ ಕೇಳುವವರಿಲ್ಲ. ಮೇಲಾಗಿ ಹಣ್ಣುಗಳು ಹಾಳಾಗುತ್ತಿವೆ.

ಅವಲಕ್ಕಿ ಜತೆ ಕಲಸಿ ತಿನ್ನಲು, ಪಾಯಸ ಮಾಡಲು ಈ ಹಣ್ಣನ್ನು ಬಳಸಲಾಗುತ್ತದೆ. ದೇಹಕ್ಕೆ ತಂಪು ಎಂಬುದು ಜನರ ನಂಬಿಕೆ. ಈ ಅವಧಿಯಲ್ಲಿ ಪ್ರತಿ ವರ್ಷ ಬಿಸಿಲು ಪ್ರಾರಂಭವಾಗುತ್ತಿತ್ತು. ಗದ್ದೆ ಕೆಲಸ ಮುಗಿಸಿ ಬಂದ ಜನ ಇದನ್ನು ತಿನ್ನುತ್ತಿದ್ದರು. ಆದರೆ, ಈ ಬಾರಿ ಇನ್ನೂ ಮಳೆಯೇ ಕಡಿಮೆಯಾಗದ ಕಾರಣ ಇದಕ್ಕೆ ಬೆಲೆ ಇಲ್ಲದಂತಾಗಿದೆ.

ಇಬುಡಲು ಬಹು ಬೇಗ ಒಡೆದು ಹಾಳಾಗುವುದರಿಂದ ಬಳ್ಳಿ ಕಟ್ಟಿ ಇಡಲಾಗುತ್ತದೆ. ಮಳೆ ಬಂದರೆ ಎಲ್ಲ ಕೊಳೆತು ಹೋಗುತ್ತದೆ. ಮಳೆ ಇದ್ದುದರಿಂದ ಜನ ಕೊಳ್ಳಲೂ ಬರುತ್ತಿಲ್ಲ. | ಲಕ್ಷ್ಮೀ ಗೌಡ ಬೆಳಂಬಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net