

ಗೋಕರ್ಣ: ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ಪರಿಣಾಮ ಗೋಕರ್ಣದ ತರಕಾರಿಗಳ ಮೇಲೆಯೂ ಆಗಿದೆ. ಈಗಾಗಲೇ ಕಳೆದ ಮೂರು ವಾರಗಳಿಂದ ವಾರದ ಸಂತೆ ರದ್ದಾಗಿದೆ. ಇನ್ನೂ ಎರಡು ವಾರ ಲಾಕ್ ಡೌನ್ ಮುಂದುವರಿದಿದ್ದು, ಸಂತೆ ನಡೆಯುವ ಸಾಧ್ಯತೆಯಿಲ್ಲ. ಇದರಿಂದಾಗಿ ಇಲ್ಲಿನ ರೈತರು ಬೆಳೆದ ತರಕಾರಿ ಖರೀದಿಸುವವರಿಲ್ಲದೆ ಬೆಲೆ ಕಳೆದುಕೊಂಡು ಕೊಳೆತು ನಾರುತ್ತಿದೆ.
ಒಳ್ಳೆ ಹೆಸರು, ಉತ್ತಮ ಬೆಲೆ: ಗೋಕರ್ಣದ ತರಕಾರಿಗೆ ಜಿಲ್ಲೆಯಲ್ಲಿ ಮಾತ್ರವಲ್ಲದೆ, ದೂರದ ಹುಬ್ಬಳ್ಳಿ- ಧಾರವಾಡದಲ್ಲೂ ಗರಿಷ್ಠ ಬೆಲೆ ದೊರಯುತ್ತದೆ. ಜಿಲ್ಲೆಯಲ್ಲಿ ಕಾರವಾರದ ವಾರದ ಸಂತೆಯಲ್ಲಿ ಗೋಕರ್ಣ ತರಕಾರಿಯೇ ಹೀರೊ. ಜತೆಗೆ ಶಿರಸಿ, ಸಿದ್ದಾಪುರ ಮುಂತಾದೆಡೆಯೂ ಇದಕ್ಕೆ ಬೆಲೆಯಿದೆ. ಇದಕ್ಕೆ ಕಾರಣ ಸಾವಯವ ಸಗಣಿ ಗೊಬ್ಬರಕ್ಕೆ ಮಾತ್ರ ಆದ್ಯತೆ ನೀಡಿ ಅಗತ್ಯವಿದ್ದರೆ ಮಾತ್ರ ಆಧುನಿಕ ಪೋಷಕಾಂಶ ಬಳಸುವ ಇಲ್ಲಿನ ಪರಂಪರಾಗತ ಕೃಷಿ ಪದ್ಧತಿ. ಹೀಗಾಗಿ, ಗೋಕರ್ಣದ ತರಕಾರಿ ರುಚಿಯೇ ಬೇರೆ ಎಂಬ ಖ್ಯಾತಿಯಿದೆ.
ಒಗ್ಗರಣೆಗೆ ಪರಿಮಳ ನೀಡುವ ಮಜ್ಜಿಗೆ ಮೆಣಸು ಮಾಡಲು ಗೋಕರ್ಣದ ಮೆಣಸೇ ಬೇಕು ಎಂಬ ಹೆಗ್ಗಳಿಕೆಯಿದೆ. ಗೋಕರ್ಣದ ಕೆಂಪು ಹರಿಗೆ, ಬಿಳಿಬೆಂಡೆ ಮತ್ತು ಚೌಳಿಯ ಬಣ್ಣವೇ ಬೇರೆ ಎಂಬ ಮಾತಿದೆ. ಇಲ್ಲಿನ ಬೇಲೆಹಿತ್ತಲು, ಬಿಜ್ಜೂರು, ಬಾವಿಕೊಡ್ಲ ಮುಂತಾದ ಹಾಲಕ್ಕಿ ಒಕ್ಕಲಿಗರ ಹಾಡಿಗಳಲ್ಲಿನ ಮೂರು ಸಾವಿರ ಎಕರೆಗೂ ಅಧಿಕ ಗದ್ದೆಗಳಲ್ಲಿ ಭತ್ತದ ಕೊಯ್ಲು ಮುಗಿದ ನಂತರ ಅಕ್ಟೋಬರ್ನಿಂದ ಏಪ್ರಿಲ್ವರೆಗೆ ಬೇಡಿಕೆಯಲ್ಲಿರುವ ಎಲ್ಲ ಬಗೆಯ ತರಕಾರಿ ಬೆಳೆಯಲಾಗುತ್ತದೆ. ಇದರ ಜತೆಗೆ ಶೇಂಗಾ ಮತ್ತು ಸಿಹಿ ಗೆಣಸು ಕೂಡ ಸೇರಿಕೊಂಡಿದೆ.
ನಡುರಾತ್ರಿಯ ಸಂತೆ: ಈ ತರಕಾರಿಗಳ ಮಾರಾಟದ ಸಂತೆ ಹಗಲಿನಲ್ಲಾಗದೆ ನಿತ್ಯ ನಡುರಾತ್ರಿಯಲ್ಲಿ ಸೇರುವುದು ಇಲ್ಲಿನ ವಿಶೇಷ. ಬೆಳಗಿನ ಜಾವದ ಒಂದು ಗಂಟೆಯಿಂದ ನಾಲ್ಕು ಗಂಟೆವರೆಗೆ ಮಾತ್ರ ನಡೆಯುವ ಸಂತೆಯಲ್ಲಿ ರೈತರು ತರಕಾರಿ ಹೊತ್ತು ತರುತ್ತಾರೆ. ಇದನ್ನು ಬೆಲೆ ನಿಗದಿ ಮಾಡಿ ಕೊಳ್ಳಲು ನಾನಾ ಕಡೆಗಳಿಂದ ಮಾರಾಟಗಾರರು ಬರುತ್ತಾರೆ. ನಿತ್ಯ ಏನಿಲ್ಲೆಂದರೂ ಅಂದಾಜು ಎರಡು ಲಕ್ಷ ರೂ.ವರೆಗೆ ನೂರು ಟನ್ಗೂ ಹೆಚ್ಚಿನ ತರಕಾರಿ 50 ರಿಂದ 60 ಮಿನಿ ಟ್ರಕ್ಗಳಲ್ಲಿ ಗೋಕರ್ಣದಿಂದ ಹೊರಗೆ ಸಾಗಾಟವಾಗುತ್ತದೆ.
ನೆಲ ಕಚ್ಚಿದ ಕಾಯಿಪಲ್ಯೆ ಬೆಲೆ...
ಕೆಜಿಗೆ 8ರೂ ಇದ್ದ ಕುಂಬಳಕಾಯಿ 2 ರೂ.ಗೆ, 40ರಿಂದ 50 ರೂ. ಇದ್ದ ಗೋಕರ್ಣ ಮೆಣಸಿಗೆ ಈಗ 10 ರಿಂದ 20 ರೂ., 10 ರೂ. ಕಿಲೊ ಇದ್ದ ಬದನೆಯನ್ನು ಈಗ 2 ರೂ.ಗೂ ಕೇಳುವವರಿಲ್ಲ. ಕೆಜಿಗೆ ಕನಿಷ್ಠ 18 ರೂ. ಇದ್ದ ಚೌಳಿಕಾಯಿ 5 ರೂ.ಗೆ ಇಳಿದಿದೆ. ಹೆಸರಾದ ಬೆಂಡೆ, ಪಡುವಲ ಮತ್ತು ಹೀರೇಕಾಯಿಯನ್ನು ಕೊಳ್ಳುವವರಿಲ್ಲ. ಮಾರಾಟಕ್ಕೆ ರೆಡಿಯಾಗಿದ್ದ 2 ಸಾವಿರ ಟನ್ಗೂ ಅಧಿಕ ಸಿಹಿ ಗೆಣಸು ಮೂಲೆಗೆ ಸೇರಿದೆ. 10 ರಿಂದ 15 ರೂ.ಗೆ ಮಾರಾಟವಾಗುತ್ತಿದ್ದ ಬಹು ಬೇಡಿಕೆ ಗೋಕರ್ಣದ ಬಸಳೆ ಸೊಪ್ಪನ್ನು ಈಗ ಖರೀದಿಸುವವರು ಇಲ್ಲದ್ದರಿಂದ ಬಳ್ಳಿಯಿಂದ ಕೊಯ್ಯುತ್ತಿಲ್ಲ. ಒಟ್ಟಾರೆ ಆರು ವಾರದ ಈ ಎಲ್ಲ ಪ್ರಕ್ರಿಯೆಗಳಿಂದ ಗೋಕರ್ಣದ ರೈತರಿಗೆ ಏನಿಲ್ಲೆಂದರೂ 75 ಲಕ್ಷ ರೂ.ಗೂ ಅಧಿಕ ಹೊರೆ ಹೊರುವ ಅನಿವಾರ್ಯತೆ ಎದುರಾಗಿದೆ.
ಕರೊನಾ ಮತ್ತು ಲಾಕ್ ಡೌನ್ನಿಂದ ಗೋಕರ್ಣದ ರೈತರಿಗೆ ಈಗಾಗಲೇ ಲಕ್ಷಾಂತರ ರೂ. ಹಾನಿಯಾಗಿದೆ. ಮೊದಲೇ ಮೌಲ್ಯ ಕಳೆದುಕೊಂಡಿದ್ದ ಇಲ್ಲಿನ ಬೇಸಾಯಕ್ಕೆ ತರಕಾರಿ ಬೆಳೆಯೇ ಅಷ್ಟಿಷ್ಟು ಟಾನಿಕ್ ಆಗಿತ್ತು. ಈಗ ಆ ಟಾನಿಕ್ ಕೂಡ ಇಲ್ಲದಂತಾಗಿದೆ. ಸರ್ಕಾರ ಇಲ್ಲಿನ ತರಕಾರಿ ಬೆಳೆಯುವ ರೈತರ ನಷ್ಟ ತುಂಬಿಕೊಡಬೇಕು. | ದಿನೇಶ ಕುಪ್ಪ ಗೌಡ ಬಿಜ್ಜೂರು, ತರಕಾರಿ ಬೆಳೆಗಾರ
ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅವರು ಗೋಕರ್ಣದ ತರಕಾರಿ ಖರೀದಿಸಿ ಅಗತ್ಯ ಉಳ್ಳವರಿಗೆ ಹಂಚಿ ರೈತರ ಸಹಾಯಕ್ಕೆ ಬಂದಿರುವುದ ಶ್ಲಾಘನೀಯ. ತರಕಾರಿ ಬೆಳೆವ ರೈತರ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟು ಪರಿಹಾರ ದೊರಕಿಸಿ ಕೊಡುವ ಪ್ರಯತ್ನಮಾಡಬೇಕು. | ರವಿ ಗುನಗ, ಸಾಮಾಜಿಕ ಕಾರ್ಯಕರ್ತ