

ಹಾವೇರಿ: ಅತಿವೃಷ್ಟಿ, ನೆರೆ ನಡುವೆಯೂ ಕಷ್ಟಪಟ್ಟು ಬೆಳೆದ ಮೆಕ್ಕೆಜೋಳದ ಬೆಲೆ ದಿನೇ ದಿನೆ ಕುಸಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ರೈತರಿಗೆ ನೆರವು ಕಲ್ಪಿಸಲು ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮೆಕ್ಕೆಜೋಳದ ಕಣಜ ಎಂದು ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು ದರ ಏರಿಕೆ ನಿರೀಕ್ಷೆಯಲ್ಲಿ ಮಾರಾಟ ಮಾಡದೇ ಸಂಗ್ರಹಿಸಿದ್ದರು. ನವೆಂಬರ್, ಡಿಸೆಂಬರ್ನಲ್ಲಿ ಕ್ವಿಂಟಾಲ್ಗೆ 2 ಸಾವಿರ ರೂ. ಆಸುಪಾಸಿಗೆ ಮಾರಾಟವಾಗುತ್ತಿತ್ತು. ಇದೀಗ ದರ 1 ಸಾವಿರ ರೂ.ಗೆ ಕುಸಿದಿದೆ. ದರ ಕುಸಿತದಿಂದ ಹೈರಾಣಾಗಿರುವ ರೈತರು, ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದನ್ನು ಕಾಯುತ್ತಿದ್ದಾರೆ. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಜಿಲ್ಲೆಯ ರೈತರ ಒತ್ತಾಯದಂತೆ ಮಾ. 13ರಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದಿಂದ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಕ್ಕಿತ್ತು. ಅಲ್ಲದೆ, ಸರ್ಕಾರ ತೆರೆದಿದ್ದ ಖರೀದಿ ಕೇಂದ್ರದತ್ತ ಸುಳಿಯದ ರೈತರು ಮಾರುಕಟ್ಟೆಯಲ್ಲೇ ಮಾರಾಟ ಮಾಡಿದ್ದರು. ಪ್ರಸಕ್ತ ಸಾಲಿನಲ್ಲಿ ಬೆಲೆ ಕುಸಿಯುತ್ತಿರುವುದು ರೈತರಿಗೆ ನಷ್ಟ ತಂದಿದೆ. ಇದರಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಗೊಂಡರೆ ಮಾರುಕಟ್ಟೆಯಲ್ಲಿಯೂ ಸಹಜವಾಗಿ ದರ ಏರಿಕೆಯಾಗಲಿದೆ ಎಂಬುದು ರೈತರ ಅನಿಸಿಕೆ.
ರೈತರ ಮನೆ ಬಾಗಿಲಿಗೆ ಬಂದು ಕೊಂಡೊಯ್ಯುತ್ತಿದ್ದ ದಲ್ಲಾಳಿಗಳು ಈಗ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಾಗಿರುವ ರೈತರು ದಲ್ಲಾಳಿಗಳು ಹೇಳಿದ ದರಕ್ಕೆ ಮೆಕ್ಕೆಜೋಳ ಮಾರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ವಣವಾಗಿದೆ ಎನ್ನುತ್ತಾರೆ ರೈತ ಮುಖಂಡ ಶಿವಾನಂದ ಗುರುಮಠ.
ಇಳುವರಿಯಲ್ಲಿಯೂ ನಷ್ಟ: ನೆರೆ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಮೆಕ್ಕೆಜೋಳ ಇಳುವರಿಯೂ ಕುಂಠಿತಗೊಂಡಿದೆ. ಎಕರೆಗೆ 40ರಿಂದ 50 ಕ್ವಿಂಟಾಲ್ ಬರುತ್ತಿದ್ದ ಇಳುವರಿ ಈ ಸಾರಿ ಅತಿಯಾದ ಮಳೆಯಿಂದ ಅಂದಾಜು 20 ಕ್ವಿಂಟಾಲ್ಗೆ ಕುಸಿದಿದೆ. ಆರಂಭದ ಫಸಲು ಬಂದಾಗ ಕಟಾವು ಮಾಡಿ ಕೆಲವರು ಮಾರಾಟ ಮಾಡಿದ್ದಾರೆ. ಇನ್ನೂ ಕೆಲವರು ಸರ್ಕಾರ ಖರೀದಿ ಕೇಂದ್ರ ಆರಂಭಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಮೆಕ್ಕೆಜೋಳ ಸಂಗ್ರಹಿಸಿಟ್ಟುಕೊಂಡಿದ್ದಾರೆ.
ಸಿಎಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ: ಮಾ. 7ರಂದು ಜಿಲ್ಲೆಯ ಹಿರೇಕೆರೂರ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಸಿಎಂ ಗಮನ ಸೆಳೆಯಲು ರೈತರು ಸಮಾರಂಭದಲ್ಲಿಯೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಎಂದು ಭಿತ್ತಿ ಪತ್ರ ಪ್ರದರ್ಶಿಸಿದ್ದರು. ಅಲ್ಲದೆ, ಸಿಎಂ ಭಾಷಣದ ವೇಳೆ ಖರೀದಿ ಕೇಂದ್ರದ ಘೊಷಣೆ ಮಾಡುವಂತೆಯೂ ಕೂಗಾಡಿದ್ದರು. ಕೃಷಿ ಸಚಿವ ಬಿ.ಸಿ. ಪಾಟೀಲರು ಈ ವಿಚಾರವನ್ನು ಸಿಎಂ ಗಮನಕ್ಕೂ ತಂದಿದ್ದರು. ಆದರೆ, ಈವರೆಗೂ ಖರೀದಿ ಕೇಂದ್ರ ಆರಂಭಕ್ಕೆ ಹಸಿರುನಿಶಾನೆ ದೊರೆತಿಲ್ಲ.
ಈ ಹಿಂದೆ ಸರ್ಕಾರವು ಕ್ವಿಂಟಾಲ್ಗೆ 1,325 ರೂ. ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಸುತ್ತಿತ್ತು. ಆದರೆ, ಈಗ ರೈತರ ಕೃಷಿ ವೆಚ್ಚ ಏರಿಕೆಯಾಗಿದೆ. ಪ್ರತಿ ಎಕರೆಗೆ 25ರಿಂದ 30 ಸಾವಿರ ರೂ.ವರೆಗೆ ಖರ್ಚಾಗುತ್ತಿದೆ. ಸರ್ಕಾರ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಂಬಲ ಬೆಲೆ ಘೊಷಣೆ ಮಾಡಿದರೆ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಬಾರಿ ಇಳುವರಿಯೂ ಕಡಿಮೆಯಾಗಿರುವುದರಿಂದ ಕನಿಷ್ಠ 2 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು.| ರುದ್ರೇಶ ಚಿನ್ನಣ್ಣನವರ ಎಪಿಎಂಸಿ ಸದಸ್ಯ ಹಾವೇರಿ
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಬೆಲೆ ಕುಸಿತದಿಂದ ಅವರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೂ ಬಂದಿದೆ. ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಗೆ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಇನ್ನೊಮ್ಮೆ ಸಿಎಂ ಗಮನ ಸೆಳೆದು ರೈತರಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತೇನೆ.| ಬಿ.ಸಿ. ಪಾಟೀಲ ಕೃಷಿ ಸಚಿವ