

ಶಿರಸಿ: ನಗರದಲ್ಲಿ ಅಧಿಕೃತ ಮಾರುಕಟ್ಟೆಗಳಿದ್ದರೂ ಎಲ್ಲೆಂದರಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಸ್ಥಳೀಯ ಮೀನುಗಾರರು ವ್ಯಾಪಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.
ಇಲ್ಲಿನ ಹಳೆಯ ಬಸ್ ನಿಲ್ದಾಣದ ಪಕ್ಕ ಮತ್ತು ಅಗಸೆಬಾಗಿಲಿನಲ್ಲಿರುವ ನಗರಸಭೆಯ ಕಟ್ಟಡದಲ್ಲಿ ಹಿಂದಿನಿಂದಲೂ ಮೀನು ವ್ಯಾಪಾರ ನಡೆಯುತ್ತಿತ್ತು. ಆದರೆ, ಲಾಕ್ಡೌನ್ ನಿಯಮಾನುಸಾರ ಎರಡೂ ಮಾರುಕಟ್ಟೆಗಳಲ್ಲಿ ವ್ಯಾಪಾರ ಸ್ಥಗಿತಗೊಂಡಿತ್ತು. ಇದೀಗ ಲಾಕ್ಡೌನ್ ನಿಯಮಾವಳಿ ಸಡಿಲಗೊಂಡರೂ ಮೀನು ಮಾರುಕಟ್ಟೆ ತೆರೆಯುವಲ್ಲಿ ಅಧಿಕಾರಿಗಳು ಮುಂದಾಗಿಲ್ಲ. ಜಿಲ್ಲಾಡಳಿತದ ಅನುಮತಿ ದೊರೆತರೆ ಹರಾಜು ಮಾಡಿ ಮೀನು ಮಾರುಕಟ್ಟೆಗೆ ಅಧಿಕೃತ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ನಾವು ಬೀದಿಗೆ ಬೀಳುವಂತಾಗಿದೆ ಎಂದು ಕೆಲ ಮೀನು ಮಾರಾಟಗಾರರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಹರಾಜಿನ ನೆಪ: ನಗರದಲ್ಲಿ 70ಕ್ಕೂ ಹೆಚ್ಚು ಮೀನು ವ್ಯಾಪಾರಿಗಳಿದ್ದಾರೆ. ಹೊರ ಊರಿನಿಂದ ಬಂದು ಮೀನು ಮಾರುವವರು 20ಕ್ಕಿಂತ ಹೆಚ್ಚು ಜನರಿದ್ದಾರೆ. ಮಾರುಕಟ್ಟೆ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗ ದೊರೆತು ಅವರನ್ನು ಅವಲಂಬಿಸಿದ ಜನರಿಗೂ ಅನುಕೂಲ ಆಗುತ್ತಿತ್ತು. ಆದರೆ, ಹರಾಜು ಪ್ರಕ್ರಿಯೆ ನೆಪವೊಡ್ಡಿ ಮಾರುಕಟ್ಟೆಯ ಸಂಕೀರ್ಣದಲ್ಲಿ ಬಹಿರಂಗವಾಗಿ ಮೀನಿನ ವ್ಯವಹಾರಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿಲ್ಲ. ಭಟ್ಕಳ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಅವಕಾಶ ನೀಡಿರುವ ಜಿಲ್ಲಾಡಳಿತವು ಶಿರಸಿಯಲ್ಲಿ ಮಾತ್ರ ಇಂದಿಗೂ ಮೀನು ಮಾರುಕಟ್ಟೆ ಬಂದ್ ಇಟ್ಟು ಮೀನಿನ ವಹಿವಾಟಿಗೆ ತಡೆಯೊಡ್ಡಿದೆ. ಇದು ಸ್ಥಳೀಯ ಮೀನು ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿದೆ.
ಇಲ್ಲಿನ ಮೀನು ಮಾರುಕಟ್ಟೆಯಲ್ಲಿ 30ಕ್ಕೂ ಹೆಚ್ಚು ಜನರು ಮೀನು ಮಾರಿ ಜೀವನ ಕಟ್ಟುಕೊಂಡಿದ್ದರು. ನಿತ್ಯ 600ರಿಂದ 800 ರೂಪಾಯಿ ದುಡಿಯುತ್ತಿದ್ದ ನಮಗೆ ಲಾಕ್ಡೌನ್ ಕಾರಣ 3 ತಿಂಗಳಿನಿಂದ ವ್ಯಾಪಾರವೇ ಇಲ್ಲ. ಬಹಿರಂಗವಾಗಿ ಗಾಡಿಯ ಮೇಲೆ ಮೀನು ಮಾರಾಟಕ್ಕೆ ಆಸ್ಪದ ನೀಡಲಾಗಿದೆ. ಜಿಲ್ಲೆಯ ಇತರೆಡೆ ಮೀನು ಮಾರುಕಟ್ಟೆ ತೆರೆಯಲು ಅಧಿಕೃತ ಆದೇಶ ನೀಡಲಾಗಿದೆ. ಆದರೆ, ಶಿರಸಿಯಲ್ಲಿ ಈವರೆಗೆ ಮೀನು ಮಾರುಕಟ್ಟೆ ತೆರೆದಿಲ್ಲ. ಇದರಿಂದ ಮೀನು ಮಾರಾಟಗಾರರಿಗೆ ಸಮಸ್ಯೆಯಾಗುತ್ತಿದೆ. | ವಿನೋದಾ ನಾಯ್ಕ ಮೀನು ಮಾರಾಟಗಾರ
ಮೀನು ಮಾರುಕಟ್ಟೆಯ ಸ್ಥಳವನ್ನು ಹರಾಜು ಮೂಲಕ ವ್ಯಾಪಾರಸ್ಥರಿಗೆ ನೀಡಲಾಗುವುದು. ಪ್ರಸ್ತುತ ಜಿಲ್ಲಾಡಳಿತಕ್ಕೆ ಕಳುಹಿಸಿದ್ದ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತ ಸೂಚನೆ ದೊರೆಯಲಿದ್ದು, ನಂತರ ಬಹಿರಂಗ ಹರಾಜು ಮೂಲಕ ವ್ಯವಸ್ಥೆ ಮಾಡಲಾಗುವುದು. | ರಮೇಶ ನಾಯಕ ಪೌರಾಯುಕ್ತ
ಮೀನು ಮಾರುಕಟ್ಟೆ ಆರಂಭಿಸುವ ಪೂರ್ವ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಮೀನು ವ್ಯಾಪಾರಿಗಳಿಗೆ ನಿರ್ದೇಶನ ನೀಡಿ ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ ಹಿಂದಿನಂತೆಯೇ ಮೀನಿನ ವ್ಯವಹಾರಕ್ಕೆ ತಕ್ಷಣವೇ ಅವಕಾಶ ನೀಡಬೇಕು. | ರವೀಂದ್ರ ನಾಯ್ಕ ಸಾಮಾಜಿಕ ಹೋರಾಟಗಾರ