ಭಾರತದ ಜಿಡಿಪಿ ಮೈನಸ್ ಶೇ.9.6ಕ್ಕೆ ಸಾಧ್ಯತೆ

GDP 27 MAR 20
Published on

ನವದೆಹಲಿ: ಕರೊನಾ ಸೋಂಕಿನ ಕಾರಣ ಜಗತ್ತಿನ ಎಲ್ಲ ದೇಶಗಳ ಜಿಡಿಪಿ ಕುಸಿತಕ್ಕೆ ಒಳಗಾಗಿದೆ. ಭಾರತದ್ದೂ ಕುಸಿತಕ್ಕೆ ಒಳಗಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮೈನಸ್ ಶೇಕಡ 9.6ರಲ್ಲಿ ಇರುವ ಸಾಧ್ಯತೆ ಇದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

ಕರೊನಾ ಬಿಕ್ಕಟ್ಟಿನ ಕಾರಣ ವಿಧಿಸಲಾದ ಲಾಕ್​ಡೌನ್​ನಿಂದಾಗಿ 2020-21ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಮೈನಸ್ 23.9ಕ್ಕೆ ಭಾರಿ ಕುಸಿತ ಕಂಡಿದ್ದರೂ ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ ತುಸು ಚೇತರಿಸಿಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್​ನ ದಕ್ಷಿಣ ಏಷ್ಯಾ ಆರ್ಥಿಕ ಮುನ್ನೋಟದ ವರದಿಯಲ್ಲಿ ತಿಳಿಸಿದೆ. ಕರೊನಾ ಬಿಕ್ಕಟ್ಟು ಭಾರತದಲ್ಲಿನ ಪೂರೈಕೆ ಮತ್ತು ಬೇಡಿಕೆ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.

ದಕ್ಷಿಣ ಏಷ್ಯಾದ ಪ್ರಾದೇಶಿಕ ಬೆಳವಣಿಗೆ ಕಳೆದ ಐದು ವರ್ಷದಿಂದ ಸರಾಸರಿ ಶೇ. 6ರಷ್ಟಿದೆ. 2020ರಲ್ಲಿ ಇದು ಮೈನಸ್ 7.7ಕ್ಕೆ ತಗ್ಗುವ ಸಾಧ್ಯತೆ ಇದೆ. 2021ರಲ್ಲಿ ಶೇಕಡ 4.5ರಷ್ಟು ಏರಿಕೆಯಾಗಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಆದರೆ ಜನಸಂಖ್ಯೆಯ ವೇಗದ ಹೆಚ್ಚಳದ ಕಾರಣ ತಲಾ ಆದಾಯವು 2019ರ ಅಂದಾಜಿಗಿಂತ ಇಳಿಕೆಯಾಗಲಿದೆ ವರದಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net