

| ಸಿ.ಎಸ್. ಸುಧೀರ್
2020ರಲ್ಲಿ ಯೆಸ್ ಬ್ಯಾಂಕ್ ಬಿಕ್ಕಟ್ಟಿನ ನಂತರ ಖಾಸಗಿ ವಲಯಕ್ಕೆ ಸೇರಿದ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಹಿವಾಟಿನ ಮೇಲೆ ಆರ್ಬಿಐ ಒಂದು ತಿಂಗಳ ನಿರ್ಬಂಧ ಹೇರಿದೆ. ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಕರ್ನಾಟಕದ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ಗಳಲ್ಲಿ ಗ್ರಾಹಕರಿಗೆ ಈ ಹಿಂದೆ ಆದ ಸಮಸ್ಯೆಗಳು ಬ್ಯಾಂಕಿಂಗ್ ಕ್ಷೇತ್ರದ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಯಾವ ಬ್ಯಾಂಕ್ನಲ್ಲಿ ದುಡ್ಡಿಟ್ಟರೆ ಸೇಫ್? ಈಗಾಗಲೇ ನೀವು ಖಾತೆ ಹೊಂದಿರುವ ಬ್ಯಾಂಕ್ ಸುರಕ್ಷಿತವೇ? ಹೀಗೆ ಹಲವು ಅನುಮಾನಗಳಿಗೆ ಉತ್ತರ ನೀಡುವ ಮಾಹಿತಿ ಇಲ್ಲಿದೆ.
ಬ್ಯಾಂಕ್ಗಳ ನಿಯಂತ್ರಣ ಹೇಗೆ? ಯಾವುದೇ ಬ್ಯಾಂಕ್ ಮೂರು ಪ್ರಮುಖ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತದೆ. ಹಣಕಾಸಿನ ವಿಚಾರಕ್ಕೆ ಬಂದಾಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪರಮಾಧಿಕಾರ ಹೊಂದಿದೆ. ಷೇರುಗಳ ವಹಿವಾಟಿನ ವಿಚಾರದಲ್ಲಿ ನಿರ್ಧಾರಗಳನ್ನು ನೀತಿ ನಿಯಮಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ( ಸೆಬಿ) ತೀರ್ಮಾನಿಸುತ್ತದೆ. ಹಾಗೆಯೇ ಬ್ಯಾಂಕ್ಗಳು ನಡೆಸುವ ಇನ್ಶೂರೆನ್ಸ್ ವಹಿವಾಟಿಗೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ( ಐಆರ್ಡಿಎಐ) ನಿಯಂತ್ರಣ ಸಂಸ್ಥೆಯಾಗಿದೆ. ಮೇಲಿನ ಎಲ್ಲ ಸಂಸ್ಥೆಗಳ ನಿಯಂತ್ರಣಕ್ಕೆ ಒಂದು ಬ್ಯಾಂಕ್ ಒಳಪಡುತ್ತದೆ. ಇಷ್ಟೆಲ್ಲಾ ನಿಯಂತ್ರಣ ಸಂಸ್ಥೆಗಳಿದ್ದರೂ ಬ್ಯಾಂಕ್ಗಳು ಹಳಿ ತಪ್ಪುತ್ತಿವೆ. ಬ್ಯಾಂಕ್ನ ಆರ್ಥಿಕ ಸ್ಥಿತಿಗತಿಯನ್ನು ಪಾರದರ್ಶಕವಾಗಿ ಸಾರ್ವಜನಿಕರ ಮುಂದೆ ಇಡುವ ಹೊಣೆಗಾರಿಕೆಯೂ ಬ್ಯಾಂಕ್ಗಳ ಮೇಲಿದೆ. ಹೀಗಿದ್ದರೂ ಬ್ಯಾಂಕ್ಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ.
1. ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ/ಸಿಎಆರ್( ಸಮರ್ಪಕ ಬಂಡವಾಳ ಅನುಪಾತ): ಕ್ಯಾಪಿಟಲ್ ಅಡ್ವಿಕ್ವೆಸಿ ರೇಷಿಯೋ ( ಸಿಎಆರ್) ಅಂದ್ರೆ ಸರಳವಾಗಿ ಬ್ಯಾಂಕ್ನ ಮೂಲ ಬಂಡವಾಳ. ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅನಿರೀಕ್ಷಿತ ನಷ್ಟಕ್ಕೆ ಒಳಗಾದಾಗ ಅದನ್ನು ಎದುರಿಸಲು ಬ್ಯಾಂಕ್ ಹೊಂದಿರುವ ಬಂಡವಾಳದ ಮೊತ್ತವನ್ನು ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಎಂದು ವಿಶ್ಲೇಷಿಸಬಹುದು. ಸಿಎಆರ್ ಹೆಚ್ಚಿಗೆ ಇದ್ದರೆ ಬ್ಯಾಂಕ್ ಯಾವುದೇ ನಷ್ಟ ಮಾಡಿಕೊಳ್ಳದೆ ಸಂಕಷ್ಟದ ಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ. ಠೇವಣಿದಾರರು ಇಟ್ಟಿರುವ ಹಣಕ್ಕೆ ಸುರಕ್ಷತೆ ಒದಗಿಸಲು ಸಾಧ್ಯವಾಗುತ್ತದೆ. ಆರ್ಬಿಐ ಪ್ರಕಾರ ಯಾವುದೇ ಬ್ಯಾಂಕ್ನ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಕನಿಷ್ಠ ಶೇ 10.5ರಷ್ಟಿರಬೇಕು.
2. ನಾನ್ ಪರ್ಫಾರ್ಮಿಂಗ್ ಅಸೆಟ್ಸ್/ ಎನ್ಪಿಎ ( ವಸೂಲಾಗದ ಸಾಲ): ಬ್ಯಾಂಕ್ಗಳ ಆರ್ಥಿಕ ಸದೃಢತೆ ಬಹಳ ಮುಖ್ಯವಾಗುತ್ತದೆ. ಬ್ಯಾಂಕ್ ನೀಡಿದ್ದ ಸಾಲಗಳ ಪೈಕಿ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳವಾದರೆ ಅದು ನೇರವಾಗಿ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ( ಸಮರ್ಪಕ ಬಂಡವಾಳ ಅನುಪಾತ/‘ಸಿಎಆರ್) ಮೇಲೆ ಪರಿಣಾಮ ಉಂಟು ಮಾಡುತ್ತದೆ. ಸಾಲ ನೀಡಿದ ನಂತರದಲ್ಲಿ 90 ದಿನಗಳ ಕಾಲ ಸಾಲ ಪಡೆದ ವ್ಯಕ್ತಿ ಬಡ್ಡಿ ಪಾವತಿ ಮಾಡದಿದ್ದರೆ ಅದನ್ನು ವಸೂಲಾಗದ ಸಾಲ ಎಂದು ಪರಿಗಣಿಸಲಾಗುತ್ತದೆ. ವಸೂಲಾಗದ ಸಾಲದ ಪ್ರಮಾಣ ಹೆಚ್ಚಿಗೆ ಇದ್ದರೆ ಬ್ಯಾಂಕ್ನ ನಿರ್ವಹಣೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.
3. ನೆಟ್ ಇಂಟರೆಸ್ಟ್ ಮಾರ್ಜಿನ್/ಎನ್ಐಎಂ (ನಿವ್ವಳ ಬಡ್ಡಿ ಮಿತಿ): ಬ್ಯಾಂಕ್ನ ಲಾಭಾಂಶವನ್ನು ಅಳೆಯುವ ಮಾನದಂಡಗಳ ಪ್ರೈಕಿ ನಿವ್ವಳ ಬಡ್ಡಿ ಮಿತಿ ಪ್ರಮುಖವಾದದ್ದು. ಬ್ಯಾಂಕ್ಗಳು ಠೇವಣಿದಾರರಿಂದ ಹಣ ಪಡೆದು ಸಾಲದ ಅಗತ್ಯವಿದ್ದವರಿಗೆ , ಬಿಸಿನೆಸ್ ಮ್ಯಾನ್ಗಳಿಗೆ ಸಾಲ ನೀಡುತ್ತವೆ. ಈ ಪ್ರಕ್ರಿಯೆಯಲ್ಲಿ ಸಾಲ ನೀಡಿರುವ ಹಣಕ್ಕೆ ಬ್ಯಾಂಕ್ ಬಡ್ಡಿ ಪಡೆದು ಠೇವಣಿದಾರರಿಗೆ ಒಂದಿಷ್ಟು ಬಡ್ಡಿ ಲಾಭವನ್ನು ವರ್ಗಾಯಿಸುತ್ತದೆ. ಠೇವಣಿ ಹಣಕ್ಕೆ ಕೊಡುವ ಬಡ್ಡಿ ಮತ್ತು ಸಾಲದ ರೂಪದಲ್ಲಿ ಹಣವನ್ನು ನೀಡುವಾಗ ಪಡೆಯುವ ಬಡ್ಡಿಯ ವ್ಯತ್ಯಾಸವನ್ನು ನೆಟ್ ಇಂಟರೆಸ್ಟ್ ಮಾರ್ಜಿನ್ ಎಂದು ಕರೆಯಲಾಗುತ್ತದೆ. ನೆಟ್ ಇಂಟರೆಸ್ಟ್ ಮಾರ್ಜಿನ್ ಹೆಚ್ಚಿಗೆ ಇದ್ದಷ್ಟೂ ಅನುಕೂಲ.
4. ಸಿಎಎಸ್ಎ ರೇಷಿಯೋ (ಬ್ಯಾಂಕ್ನಲ್ಲಿರುವ ಚಾಲ್ತಿ ಮತ್ತು ಉಳಿತಾಯ ಖಾತೆಗಳಲ್ಲಿನ ಮೊತ್ತ): ಬ್ಯಾಂಕ್ಗಳ ಚಾಲ್ತಿ ಖಾತೆ (ಕರೆಂಟ್ ಅಕೌಂಟ್ ) ಮತ್ತು ಉಳಿತಾಯ ಖಾತೆಗಳಲ್ಲಿನ ( ಸೇವಿಂಗ್ಸ್ ಅಕೌಂಟ್) ಒಟ್ಟು ಠೇವಣಿಗಳ ಅನುಪಾತವನ್ನು ಸಿಎಎಸ್ಎ ಅನುಪಾತ (ಕಾಸಾ ರೇಷಿಯೋ) ಎನ್ನಬಹುದು. ಸಿಎಎಸ್ಎ ತಗ್ಗಿದರೆ ಹೊರಗಿನಿಂದ ಹೆಚ್ಚಿನ ಬಡ್ಡಿ ದರ ನೀಡಿ ಬ್ಯಾಂಕ್ ಬಂಡವಾಳ ಸಂಗ್ರಹ ಮಾಡಬೇಕಾಗುತ್ತದೆ. ಸಿಎಎಸ್ಎ ರೇಷಿಯೋ ಕಡಿಮೆ ಇದ್ದರೆ ಬ್ಯಾಂಕ್ ತನ್ನ ಬಂಡವಾಳಕ್ಕಾಗಿ ಹೆಚ್ಚು ಅವಲಂಬನೆ ಮಾಡಬೇಕಾಗುತ್ತದೆ. ಸಿಎಎಸ್ಎ ರೇಷಿಯೋ ಹೆಚ್ಚಿಗೆ ಇದ್ದಷ್ಟೂ ಬ್ಯಾಂಕ್ ಹೆಚ್ಚು ಸುರಕ್ಷಿತ ಎಂದರ್ಥ. 5. ಪ್ರಾವಿಜನ್ ಕವರೇಜ್ ರೇಷಿಯೋ (ಪಿಸಿಆರ್): ವಸೂಲಾಗದ ಸಾಲಗಳಿಂದಾಗುವ ( ಎನ್ಪಿಎಗಳಿಂದ) ಬ್ಯಾಂಕ್ಗಾಗುವ ನಷ್ಟ ಭರಿಸಲು ಬ್ಯಾಂಕ್ ತನ್ನ ನಿಧಿಯಿಂದ ಒಂದಷ್ಟು ಹಣ ತೆಗೆದಿಡುತ್ತದೆ. ಇದೇ ಪ್ರಾವಿಜನ್ ಕವರೇಜ್ ರೇಷಿಯೋ ( ಪಿಸಿಆರ್). ಪಿಸಿಆರ್ ಅನುಪಾತ ಶೇ. 70ಕ್ಕಿಂತ ಹೆಚ್ಚಿಗೆ ಇದ್ದರೆ ನಿರೀಕ್ಷಿತ ಅಥವಾ ಅಂದಾಜು ನಷ್ಟವನ್ನು ಎದುರಿಸಲು ಬ್ಯಾಂಕ್ ಪೂರ್ವತಯಾರಿ ಮಾಡಿಕೊಂಡಿದೆ ಎಂದು ಹೇಳಬಹುದು.
(ಲೇಖಕರು ಇಂಡಿಯನ್ ಮನಿ ಡಾಟ್ ಕಾಂ ಸಂಸ್ಥಾಪಕ – ಸಿಇಒ)