

ನಿರುದ್ಯೋಗ ಸಮಸ್ಯೆ, ಓದಿಗೆ ತಕ್ಕಂತೆ ರೂಪುಗೊಳ್ಳದ ಜೀವನ, ಆಧುನಿಕ ಜಗತ್ತಿನ ತುರ್ತು ಒತ್ತಡಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಯುವಜನರು ಕಷ್ಟಪಡುತ್ತಿದ್ದಾರೆ. ಅಂಥವರ ನಡುವೆ ಒತ್ತಡಗಳನ್ನು ಮೆಟ್ಟಿ ನಿಂತು ಅನ್ನ ಗಳಿಸುತ್ತಿರುವ ಯುವಜನರೂ ಇದ್ದಾರೆ. ಆ ಸಾಲಿನಲ್ಲಿ ನಿಲ್ಲಬಲ್ಲವರು ಭರಮಣ್ಣ ಈರಪಣ್ಣ ಯರಗಟ್ಟಿ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿ ಭರಮಣ್ಣ, ಜೇನು ಸಾಕಣೆಯಲ್ಲಿ ಸಾಧನೆ ಮಾಡಿದ್ದಾರೆ. ಮೂಲತಃ ರೈತ ಕುಟುಂಬದವರಾದ ಅವರು ತಮ್ಮದೇ ಹೊಲದಲ್ಲಿ ಜೇನು ಸಾಕಣೆ ಮಾಡುತ್ತಿದ್ದಾರೆ. ಇದನ್ನೇ ಬದುಕಿನ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಡಿಪ್ಲೊಮಾ ಇನ್ ಅಗ್ರಿಕಲ್ಚರ್ ಓದಿರುವ ಭರಮಣ್ಣ, ಜೇನು ಸಾಕಣೆ ಕುರಿತು ತರಬೇತಿಯನ್ನೂ ನೀಡುತ್ತಿದ್ದಾರೆ.
ಆರಂಭದಲ್ಲಿ ಒಂದೇ ಒಂದು ಪೆಟ್ಟಿಗೆಯಿಂದ ಜೇನು ಸಾಕಣೆ ಆರಂಭಿಸಿದ್ದು, ಈಗ ಹತ್ತು ಪೆಟ್ಟಿಗೆಗಳಿವೆ. ‘ಸರ್ಕಾರಿ ಅಥವಾ ಖಾಸಗಿ ನೌಕರಿ ಸಿಗಲಿಲ್ಲ ಎಂಬ ಕಾರಣಕ್ಕೆ ನಾನು ನಿರಾಶನಾಗಲಿಲ್ಲ. ಡಿಪ್ಲೊಮಾ ಓದುವಾಗಲೇ ಗುರುಗಳಾದ ಗಣೇಶ ಭಟ್ ಅವರಿಂದ ಪ್ರೇರಿತನಾಗಿದ್ದೆ. ವಿದ್ಯಾಭ್ಯಾಸ ಮುಗಿದ ನಂತರ ಜೇನು ಸಾಕಣೆ ಮಾಡತೊಡಗಿದೆ. ಆರಂಭದಲ್ಲಿ ಆತಂಕ ಇತ್ತಾದರೂ ಬರಬರುತ್ತ ಆದಾಯ ಕೈಸೇರತೊಡಗಿತು’ ಎನ್ನುತ್ತಾರೆ ಭರಮಣ್ಣ.
ಆದಾಯದ ಪ್ರಮಾಣ: ಆರಂಭದಲ್ಲಿ ತಮ್ಮದೆ ತೋಟದಲ್ಲಿ ಒಂದು ಜೇನು ಪೆಟ್ಟಿಗೆ ಇಟ್ಟು ಕೃಷಿ ಆರಂಭಿಸಿದ ಭರಮಣ್ಣ ನಂತರ ಮತ್ತೆರಡು ಪೆಟ್ಟಿಗೆ ತಂದರು. ತೋಟದ ಸುತ್ತಮುತ್ತ ಸಮೃದ್ಧ ಬೆಳೆಗಳು, ಹಣ್ಣು-ಹಂಪಲುಗಳ ಮರಗಳಿರುವುದರಿಂದ ಜೇನು ಸಾಕಣೆ ಮತ್ತಷ್ಟು ಸುಲಭವಾಯಿತು. ಹುಮ್ಮಸ್ಸು ಇಮ್ಮಡಿಗೊಂಡಿದ್ದರಿಂದ ಭರಮಣ್ಣ ಮತ್ತೆ ಎಂಟು ಪೆಟ್ಟಿಗೆ ತಂದು (ಈಗ ಒಟ್ಟು ಹತ್ತು ಪೆಟ್ಟಿಗೆ) ಜೇನು ಸಾಕತೊಡಗಿದರು. ಇದೀಗ ಅವರು ಒಂದು ಬಾಕ್ಸ್ನಿಂದ ನಾಲ್ಕೂವರೆ ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ, ಜೇನು ಮೇಣದಿಂದಲೂ ಲಾಭ ಗಳಿಸುತ್ತಿದ್ದಾರೆ. ‘ಯಾವುದೋ ನೌಕರಿ ಮಾಡಿ ತಿಂಗಳ ಸಂಬಳಕ್ಕೆ ಕೈ ಚಾಚುವುದಕ್ಕಿಂತ ಹೀಗೆ ಇದ್ದುದರಲ್ಲಿಯೇ ಕಾಲು ಚಾಚಲು ಅವಕಾಶ ಮಾಡಿಕೊಡುವ ಆದಾಯದ ಮೂಲ ಹುಡುಕಿಕೊಳ್ಳಬೇಕು’ ಎನ್ನುತ್ತಾರೆ ಈ ಸಾಧಕ.
ತರಬೇತಿ ನೀಡುವ ಹುಮ್ಮಸ್ಸು
ಜೇನು ಸಾಕಣೆ ಮಾಡುತ್ತಲೇ ತಾವು ಕಲಿತ ವಿದ್ಯೆಯನ್ನು ಆಸಕ್ತರಿಗೂ ಹಂಚುವುದು ಅವರ ಹೆಚ್ಚುಗಾರಿಕೆ. ತಮ್ಮನ್ನು ಹುಡುಕಿಕೊಂಡು ಬರುವ ಜನರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಜೇನು ಕುಟುಂಬಗಳನ್ನು ಬೇರೆ ಬೇರೆ ತಾಲೂಕುಗಳಲ್ಲಿ ಪರಾಗಸ್ಪರ್ಶಕ್ಕಾಗಿ ಬಳಸಿಕೊಳ್ಳುತ್ತಾರೆ. ಜೇನು ನೊಣಗಳು ಪರಾಗಸ್ಪರ್ಶ ಮಾಡುವುದರಿಂದ ಹೊಲದಲ್ಲಿನ ಬೆಳೆಗಳ ಇಳುವರಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ ಭರಮಣ್ಣ. (ಸಂಪರ್ಕ ಸಂಖ್ಯೆ: 9743377067)
ಜೇನು ಸಂಪೂರ್ಣ ನಾಶವಾದ ಐದಾರು ವರ್ಷಗಳಲ್ಲಿ ಭೂಮಿ ಮೇಲೆ ಯಾವುದೇ ಪ್ರಾಣಿ, ಪಕ್ಷಿ ಬದುಕುವುದಿಲ್ಲ. ಹಾಗಾಗಿ ಜೇನು ಕುಟುಂಬಗಳನ್ನು ನಾಶ ಮಾಡುವುದು, ಸುಡುವುದು, ಔಷಧ ಸಿಂಪಡಿಸುವುದನ್ನು ಮಾಡಬಾರದು. ಜೇನು ಸಾಕಣೆ ಖಂಡಿತ ಉದ್ಯೋಗವಾಗಬಲ್ಲದು. ಯುವಜನರು ಸಮಗ್ರ ಕೃಷಿ ಪದ್ಧತಿಯಡಿ ಜೇನು ಸಾಕಣೆಯನ್ನೂ ಮಾಡಿದರೆ ಆದಾಯ ಗಳಿಸಬಹುದು. | ಭರಮಣ್ಣ ಯರಗಟ್ಟಿ ಜೇನು ಸಾಕಣೆದಾರ
ಮಲ್ಲಿಕಾರ್ಜುನ ತಳವಾರ ಬೆಳಗಾವಿ