

ಕುಂದಾಪುರ: ಮಧ್ಯ ವಯಸ್ಕ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಾಪುರದ ಕೋಡಿ ಕಿನಾರೆಯಲ್ಲಿ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹನುಮಂತ ನಗರದ ರಮೇಶ್ (45) ಹಾಗೂ ಆತನ ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು ಎಂದು ತಿಳಿದು ಬಂದಿದೆ.
ರಮೇಶ್ ತನ್ನ ಸ್ನೇಹಿತನ ಪತ್ನಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ಮಹಿಳೆಯ ಕುಟುಂಬದವರಿಗೆ ತಿಳದು ಗಲಾಟೆ ನಡೆದಿತ್ತು. ಹೀಗಾಗಿ ಇಬ್ಬರು ಕುಂದಾಪುರದ ಕಡಲ ಕಿನಾರೆಗೆ ತೆರಳಿದ್ದರು. ಇಬ್ಬರು ಕಾರಿನಲ್ಲಿ ಕುಳಿತು ವಿಷ ಸೇವಿಸಿ ನರಳಾಡುತ್ತಿದ್ದರು. ನರಳಾಟ ಕೇಳಿದ ಸ್ಥಳೀಯರು ಕೂಡಲೇ ಇಬ್ಬರನ್ನು ಚಿಕಿತ್ಸೆಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಇಬ್ಬರು ಸ್ಪಂದಿಸುತ್ತಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ದೂರು ದಾಖಲಿಸಿರುವ ಪೊಲೀಸರು ಇಬ್ಬರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಕುಟುಂಬದವರು ಶೀಘ್ರವೇ ಕುಂದಾಪುರಕ್ಕೆ ತೆರಳಿದ್ದಾರೆ.
ರಮೇಶ್ಗೆ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಅಲ್ಲದೆ ಅವರ ಪ್ರೇಯಸಿಗೂ ವಿವಾಹವಾಗಿ ಮಕ್ಕಳಿದ್ದಾರೆ. ಇಬ್ಬರ ನಡುವೆ ಹಲವು ವರ್ಷಗಳಿಂದ ದೈಹಿಕ ಸಂಪರ್ಕ ಇತ್ತು ಎಂದು ತಿಳಿದು ಬಂದಿದೆ.