ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 500 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 9,200ರಿಂದ ಕೆಳಕ್ಕೆ

BSE 23 March 20
Published on

ಮುಂಬೈ: ಕರೊನಾ ಕರಿಛಾಯೆ ಜಾಗತಿಕ ಅರ್ಥವ್ಯವಸ್ಥೆ ಮೇಲೆ ವ್ಯಾಪಿಸಿದ್ದು, ಷೇರುಪೇಟೆ ವ್ಯವಹಾರವೂ ಇಳಿಮುಖವಾಗಿಯೇ ಸಾಗಿದೆ. ಭಾರತದ ಷೇರುಪೇಟೆಯಲ್ಲಿ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 500ಕ್ಕೂ ಹೆಚ್ಚು ಅಂಶ ಕುಸಿತ ಕಂಡರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್ಎಸ್​ಇ) ಸೂಚ್ಯಂಕ ನಿಫ್ಟಿ 9,200ಕ್ಕೂ ಕೆಳಕ್ಕೆ ಕುಸಿದಿದೆ.

ಜಾಗತಿಕ ಮಾರುಕಟ್ಟೆಯ ಪರಿಣಾಮ ಬ್ಯಾಂಕಿಂಗ್​, ಐಟಿ ಕಂಪನಿ ಷೇರುಗಳ ಮೇಲಾಗಿದ್ದು ನಷ್ಟ ಅನುಭವಿಸಿವೆ. ಹೀಗಾಗಿ ಆರಂಭಿಕ ವಹಿವಾಟಿನಲ್ಲ ಸೆನ್ಸೆಕ್ಸ್​ 534.23 ಅಂಶ ಕುಸಿದಿತ್ತು. ಬಳಿಕ 31,328.85 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು. ಇದೇ ರೀತಿ ನಿಫ್ಟಿ 129.35 ಅಂಶ ಕುಸಿದು 9,184.55 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಬಜಾಜ್ ಫೈನಾನ್ಸ್​ ಸೆನ್ಸೆಕ್ಟ್ ಪಟ್ಟಿಯಲ್ಲಿ ಗರಿಷ್ಠ ಶೇಕಡ 5 ನಷ್ಟ ಅನುಭವಿಸಿದೆ. ಇದರ ಬೆನ್ನಿಗೆ ಐಸಿಐಸಿಐ ಬ್ಯಾಂಕ್​, ಇಂಡಸ್​ಇಂಡ್ ಬ್ಯಾಂಕ್​, ಏಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್​, ಎಸ್​ಬಿಐ, ಇನ್​ಫೋಸಿಸ್, ಟಿಸಿಎಸ್​ ಕಂಪನಿ ಷೇರುಗಳು ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಹೀರೋ ಮೋಟೋಕಾರ್ಪ್​, ಸನ್​ ಫಾರ್ಮಾ, ಎಲ್​ಆ್ಯಂಡ್ ಟಿ, ಒಎನ್​ಜಿಸಿ, ಎಚ್​ಸಿಎಲ್​ ಟೆಕ್​ ಷೇರುಗಳು ಲಾಭಗಳಿಸಿವೆ.

ಈ ಹಿಂದಿನ ದಿನದ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕ 483.53 ಅಂಶ ಅಥವಾ ಶೇಕಡ 1.54 ಅಂಶ ಕುಸಿದು 31,863.08ರಲ್ಲೂ, ನಿಫ್ಟಿ 126.60 ಅಂಶ ಅಥವಾ ಶೇಕಡ 1.38 ಅಂಶ ಕುಸಿದು 9,313.90ಯಲ್ಲಿ ವಹಿವಾಟು ಕೊನೆಗೊಳಿಸಿದ್ದವು. ಗುರುವಾರದ ತಾತ್ಕಾಲಿಕ ಡೇಟಾ ಪ್ರಕಾರ, ಫಾರಿನ್​ ಪೋರ್ಟ್​ಫೋಲಿಯೋ ಇನ್​ವೆಸ್ಟರ್​​ಗಳು ಬಂಡವಾಳ ಮಾರುಕಟ್ಟೆಯಲ್ಲಿ 114.58 ಕೋಟಿ ರೂಪಾಯಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯ ಪ್ರೊಜೆಕ್ಷನ್​ ಅನ್ನು 2020-21ರ ವರ್ಷಕ್ಕೆ ಫಿಚ್​ ರೇಟಿಂಗ್​ ಶೇಕಡ 0.8 ಇಳಿಕೆ ಮಾಡಿದೆ. ಈ ಏಜೆನ್ಸಿ ಜಾಗತಿಕ ಜಿಡಿಪಿ ಮುನ್ಸೂಚನೆಯಲ್ಲೂ ಭಾರಿ ಇಳಿಕೆ ಮಾಡಿದೆ. ಇದರ ಪ್ರಕಾರ 2020ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ಶೇಕಡ 3.9 ಇಳಿಯಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net