ಸೆನ್ಸೆಕ್ಸ್​ 300ಕ್ಕೂ ಹೆಚ್ಚು ಅಂಶ ಕುಸಿತ, ನಿಫ್ಟಿ 9,900ರ ಕೆಳಕ್ಕೆ

NSE BSE 20 DEC 19
Published on

ಮುಂಬೈ: ಜಾಗತಿಕ ಮಾರುಕಟ್ಟೆ ದುರ್ಬಲವಾಗಿದ್ದು, ಷೇರುಪೇಟೆಯ ವಹಿವಾಟು ಕೂಡ ಇಳಿಮುಖವಾಗಿ ಮುಂದುವರಿದಿದೆ. ಭಾರತೀಯ ಷೇರುಪೇಟೆಯಲ್ಲೂ ಸೋಮವಾರ ಬೆಳಗ್ಗೆ ಆರಂಭಿಕ ವಹಿವಾಟು ಕುಸಿತ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 300ಕ್ಕೂ ಹೆಚ್ಚು ಅಂಶ ಕುಸಿತ ಕಂಡರೆ, ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ 9,900ಕ್ಕಿಂತ ಕೆಳಕ್ಕೆ ಜಾರಿದೆ.

ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್​ 362.96 ಅಂಶ ಕುಸಿತ ಕಂಡು 33,384.75ಕ್ಕೆ ಕುಸಿದು ನಂತರದಲ್ಲಿ 33,417.93ರಲ್ಲಿ ವಹಿವಾಟು ಮುಂದುವರಿಸಿತ್ತು. ಇದೇ ರೀತಿ, ನಿಫ್ಟಿ 96.90 ಅಂಶ ಕುಸಿತ ಕಂಡು 9,876ರಲ್ಲಿ ವಹಿವಾಟು ಮುಂದುವರಿಸಿತ್ತು.

ಸೆನ್ಸೆಕ್ಸ್ ಪ್ಯಾಕ್​ನಲ್ಲಿ ಇಂಡಸ್​ಇಂಡ್ ಬ್ಯಾಂಕ್​ನ ಷೇರುಗಳು ಗರಿಷ್ಠ ಶೇಕಡ 4 ಕುಸಿದರೆ, ಟಾಟಾ ಸ್ಟೀಲ್​, ಬಜಾಜ್ ಫೈನಾನ್ಸ್​, ಐಸಿಐಸಿಐ ಬ್ಯಾಂಕ್​, ಏಕ್ಸಿಸ್​ ಬ್ಯಾಂಕ್​, ಎನ್​ಟಿಪಿಸಿ, ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ ಷೇರುಗಳು ನಷ್ಟ ಅನುಭವಿಸಿವೆ. ಇದೇ ವೇಳೆ, ಸನ್​ಫಾರ್ಮಾ, ಇನ್​ಫೋಸಿಸ್, ನೆಸ್ಟ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್​ ಷೇರುಗಳು ಲಾಭಗಳಿಸಿವೆ.

ಈ ಹಿಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್​ 242.52 ಅಂಶ ಏರಿಕೆ ಕಂಡು 33,780.89ರಲ್ಲಿ ದಿನದ ವಹಿವಾಟು ಕೊನೆಗೊಳಿಸಿತ್ತು. ಇದೇ ರೀತಿ ನಿಫ್ಟಿ ಕೂಡ 70.90 ಅಂಶ ಏರಿದ್ದು, 9,972.90ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಶುಕ್ರವಾರದ ವಹಿವಾಟಿನ ವೇಳೆ ಬಂಡವಾಳ ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು 1,311.49 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net