

ಮುಂಬೈ: ಕರೊನಾ ಸೋಂಕಿನ ಕರಿಛಾಯೆಯಿಂದ ಚೇತರಿಕೆ ಕಾಣದ ಷೇರುಪೇಟೆಯ ವಹಿವಾಟು ಕೂಡ ನಿಸ್ತೇಜವಾಗಿ ಮುಂದುವರಿದಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 400ಕ್ಕೂ ಹೆಚ್ಚು ಅಂಶ ಕುಸಿತ ಕಂಡರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ 9,200ರ ಕೆಳಕ್ಕೆ ಕುಸಿದಿದೆ.
ಮಂಗಳವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 400.20 ಅಂಶ ಕುಸಿದು 31,097.50ಕ್ಕೆ ಕುಸಿದು ನಂತರ 31,161.02ರಲ್ಲಿ ವಹಿವಾಟು ಮುಂದುವರಿಸಿತ್ತು. ಇದೇ ರೀತಿ, ನಿಫ್ಟಿ 103.95 ಅಂಶ ಕುಸಿತ ಕಂಡು 9,135.25 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು. ಸೆನ್ಸೆಕ್ಸ್ ಪಟ್ಟಿಯಲ್ಲಿ ಏಷ್ಯನ್ ಪೇಂಟ್ಸ್ ಷೇರುಗಳು ಗರಿಷ್ಠ ಶೇಕಡ 3 ನಷ್ಟ ಅನುಭವಿಸಿದರೆ, ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಮಾರುತಿ, ಒಎನ್ಜಿಸಿ, ಎಚ್ಯುಎಲ್, ಐಸಿಐಸಿಐ ಬ್ಯಾಂಕ್, ಕೊಟಾಕ್ ಬ್ಯಾಂಕ್ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇದೇ ವೇಳೆ, ಅಲ್ಟ್ರಾಟೆಕ್ ಸಿಮೆಂಟ್, ಟೆಕ್ ಮಹಿಂದ್ರಾ, ಸನ್ ಫಾರ್ಮಾ, ಐಟಿಸಿ, ಎನ್ಟಿಪಿಸಿ ಷೇರುಗಳು ಲಾಭದಲ್ಲಿ ವಹಿವಾಟು ಮುಂದುವರಿಸಿವೆ.
ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 81.48 ಅಂಶ ಕುಸಿತದೊಂದಿಗೆ 31,561.22ರಲ್ಲಿ ದಿನದ ವಹಿವಾಟು ಮುಗಿಸಿತ್ತು. ನಿಫ್ಟಿ 12.30 ಅಂಶ ಕುಸಿತ ಕಂಡು 9,239.20 ಅಂಶದಲ್ಲಿ ವಹಿವಾಟು ಮುಗಿಸಿತ್ತು. ಇನ್ನು, ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್ ಸೋಮವಾರ ಕ್ಯಾಪಿಟಲ್ ಮಾರುಕಟ್ಟೆಯಿಂದ 534.87 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಖರೀಸಿದ್ದಾರೆ. (ಏಜೆನ್ಸೀಸ್)