

ಮುಂಬೈ: ಕೊರನಾ ಕರಿಛಾಯೆ ಇಡಿ ಜಗತ್ತನ್ನೇ ಆವರಿಸಿದ್ದು, ಷೇರುಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲೇ ಇದೆ. ಆದಾಗ್ಯೂ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 600ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ನಿಫ್ಟಿ 9,300 ಅಂಶದ ಮೇಲೇರಿದೆ.
ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ 31,977.82 ಅಂಶಕ್ಕೆ ಏರಿಕೆಯಾಗಿದ್ದು, 632.65 ಅಂಶ ಹೆಚ್ಚಳ ದಾಖಲಿಸಿತ್ತು. ಬಳಿಕ 31,959.87ರಲ್ಲಿ ವಹಿವಾಟು ಮುಂದುವರಿಸಿದೆ. ಇದೇ ರೀತಿ ನಿಫ್ಟಿ 174.20 ಅಂಶ ಏರಿಕೆಯಾಗಿದ್ದು, 9,328.60 ಅಂಶ ಏರಿ ವಹಿವಾಟು ಮುಂದುವರಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಬಜಾಜ್ ಆಟೋ ಟಾಪ್ ಗೇನರ್ ಆಗಿ ಮೂಡಿದ್ದು ಇದರ ಷೇರುಗಳು ಶೇಕಡ 4 ಲಾಭಾಂಶ ಕಂಡಿವೆ. ಸನ್ಫಾರ್ಮಾ, ಇಂಡಸ್ಇಂಡ್ ಬ್ಯಾಂಕ್, ಮಾರುತಿ, ಎಚ್ಡಿಎಫ್ಸಿ, ಏಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಕೊಟಾಕ್ ಬ್ಯಾಂಕ್ ಷೇರುಗಳು ಕೂಡ ಲಾಭ ಗಳಿಸಿವೆ. ಇನ್ನೊಂದೆಡೆ ಎನ್ಟಿಪಿಸಿ, ಪವರ್ಗ್ರಿಡ್, ಏಷ್ಯನ್ಪೇಂಟ್ಸ್ ಷೇರುಗಳು ನಷ್ಟ ಅನುಭವಿಸಿವೆ.
ಈ ಹಿಂದಿನ ದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 535.86 ಅಂಶ ಇಳಿಕೆಯಾಗಿ 31,327.22 ರಲ್ಲೂ, ನಿಫ್ಟಿ 159.50 ಅಂಶ ಇಳಿಕೆಯಾಗಿ 9,154.40ರಲ್ಲಿ ದಿನದ ವಹಿವಾಟು ಕೊನೆಗೊಳಿಸಿದ್ದವು. ಶುಕ್ರವಾರದ ಡೇಟಾ ಪ್ರಕಾರ, ಕ್ಯಾಪಿಟಲ್ ಮಾರುಕಟ್ಟೆಯಲ್ಲಿ 207.29 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳು ಮಾರಾಟ ಮಾಡಿದ್ದಾರೆ. (ಏಜೆನ್ಸೀಸ್)