ಷೇರುಪೇಟೆ ರಕ್ತಪಾತ ಒಂದೇ ದಿನ 7 ಲಕ್ಷ ಕೋಟಿ ರೂಪಾಯಿ ನಷ್ಟ; ಭಾರತಕ್ಕೆ ಕರಾಳ ದಿನ

stock-markets 10 FEB 20
Share Trading at a firm in Kolkata on the Budget presentation day on February 01, 2017. Sensex soared by nearly 500 points with infusing Rs. 10,000 crore in public sector banks and keeping the long-term capital gains tax unchanged for the capital markets. Express photo by Partha Paul. 01.02.2017.
Published on

ನವದೆಹಲಿ: ಮಾರಕ ಕರೊನಾ ವೈರಸ್ ಹಾವಳಿ ಹಾಗೂ ಕಚ್ಚಾತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಬೆಲೆ ಇಳಿಕೆಯ ಕೆಟ್ಟ ಹೊಡೆತಕ್ಕೆ ತತ್ತರಿಸಿರುವ ಭಾರತದ ಷೇರು ಮಾರುಕಟ್ಟೆಯ ಸುಮಾರು 7 ಲಕ್ಷ ಕೋಟಿ ರೂ. ಸಂಪತ್ತು ಸೋಮವಾರ ಒಂದೇ ದಿನ ಕರಗಿ ಹೋಗಿದೆ. 2008ರಲ್ಲಿ ಉಂಟಾಗಿದ್ದ ಜಾಗತಿಕ ಆರ್ಥಿಕ ಹಿಂಜರಿತಕ್ಕಿಂತ ಇದು ಭೀಕರ ಸ್ಥಿತಿಯಾಗಿದ್ದು, ಜಾಗತಿಕ ಷೇರು ಮಾರುಕಟ್ಟೆಗೆ ಹೋಲಿಸಿದಲ್ಲಿ ಭಾರತದಲ್ಲೇ ಅತೀ ಹೆಚ್ಚು ನಷ್ಟ ಉಂಟಾಗಿದೆ.

ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಬರೋಬ್ಬರಿ 1,941.67 (ಶೇ.5.17) ಅಂಶ ಇಳಿಕೆ ಕಂಡು 35,634.95ಕ್ಕೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಇದಕ್ಕೂ ಮೊದಲು ವಹಿವಾಟಿನ ಮಧ್ಯಭಾಗದಲ್ಲಿ ಸೆನ್ಸೆಕ್ಸ್ 2,467 ಅಂಶಗಳವರೆಗೂ ಇಳಿಕೆ ದಾಖಲಿಸಿತ್ತು. ನಿಫ್ಟಿ ಕೂಡ 538.00 (ಶೇ.4.90) ಅಂಶ ಇಳಿಕೆ ಕಂಡು 10, 451.45ಕ್ಕೆ ವಹಿವಾಟು ಅಂತ್ಯಗೊಳಿಸಿದೆ.

ಸೆನ್ಸೆಕ್ಸ್​ನಲ್ಲಿ ಈ ವರ್ಷದ ಆರಂಭವಾದಾಗಿನಿಂದ ಒಟ್ಟು 5,672 (ಶೇ.13.73) ಅಂಶ ಇಳಿಕೆ ಕಂಡಿದೆ. ನಿಫ್ಟಿ ಕೂಡ ಕಳೆದೆರಡು ತಿಂಗಳಲ್ಲಿ ಒಟ್ಟು 1,731 (ಶೇ.14.2) ಅಂಶ ಪತನವಾಗಿದೆ. ವಿಶೇಷವೆಂದರೆ 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಿದ್ದಾಗ ಜನವರಿಯಿಂದ ಮಾರ್ಚ್ ಅವಧಿಯಲ್ಲೇ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಪತನ ಕಂಡಿತ್ತು. ಈಗ ಕೂಡ ಅದೇ 3 ತಿಂಗಳ ಅಂತರದಲ್ಲಿ ಅತಿ ದೊಡ್ಡ ನಷ್ಟ ಅನುಭವಿಸಿದೆ. ಜತೆಗೆ ಅಮೆರಿಕ, ಬ್ರಿಟನ್, ಜರ್ಮನಿ, ಜಪಾನ್, ಹಾಂಕಾಂಗ್, ಸೇರಿದಂತೆ ವಿಶ್ವದ ಎಲ್ಲ ಷೇರುಪೇಟೆಗಳಲ್ಲೂ ಸೋಮವಾರ ನಷ್ಟ ಕಂಡು ಬಂದಿದೆ.

ನಷ್ಟ ಕಂಡ ಕಂಪನಿಗಳು: ಷೇರು ಮಾರುಕಟ್ಟೆಯಲ್ಲಿ ಸೋಮವಾರ ಒಎನ್​ಜಿಸಿ ಅತಿ ಹೆಚ್ಚು ನಷ್ಟ ಅನುಭವಿಸಿದ್ದು, ಅದರ ಷೇರುಗಳು ಶೇ.16 ಕುಸಿತ ಕಂಡಿವೆ. ನಂತರದ ಸ್ಥಾನಗಳಲ್ಲಿ ಇಂಡಸ್ಲ್ಯಾಂಡ್ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಎಸ್​ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಆಟೋ ಇವೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.12 ರಷ್ಟು ಇಳಿಕೆಯಾಗಿದ್ದು, 10 ವರ್ಷಗಳಲ್ಲಿ ಮೊದಲ ಬಾರಿಗೆ ನಷ್ಟ ಅನುಭವಿಸಿದೆ. ಎಸ್​ಬಿಐ ಷೇರುಗಳ ಮೌಲ್ಯ ಶೇ.6ಕ್ಕಿಂತಲೂ ಕುಸಿದಿವೆ. ಮತ್ತೊಂದೆಡೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಸೂಪರ್​ಸೀಡ್ ಆಗಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ಷೇರು ಮೌಲ್ಯ ಶೇ.5ರಷ್ಟು ಏರಿಕೆ ಕಂಡಿದೆ.

ಕುಸಿತಕ್ಕೆ ಪ್ರಮುಖ ಕಾರಣ

  • 109 ದೇಶಗಳಿಗೆ ಹರಡಿರುವ ಕರೊನಾ ವೈರಸ್ 1.10 ಲಕ್ಷ ಜನರಿಗೆ ತಗುಲಿರುವುದರಿಂದ ವಿಶ್ವದ ಬಹುತೇಕ ಕಡೆ ವ್ಯಾಪಾರ,ವಹಿವಾಟು ಸ್ತಬ್ಧವಾಗಿದೆ. ಅದರ ಭೀಕರತೆ ಷೇರು ಮಾರುಕಟ್ಟೆಗೂ ತಗುಲಿದೆ
  • ಪ್ರಸಕ್ತ ವರ್ಷ ಮಾರ್ಚ್ ಆರಂಭದಿಂದ ಈವರೆಗೆ ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ -ಠಿ; 13,157 ಕೋಟಿ ರೂ. ಹಿಂಪಡೆದಿರುವುದು, ಮಾ.2ರಿಂದ 6ನೇ ತಾರೀಕಿನ ಅಂತರದಲ್ಲಿ ವಿದೇಶಿ ಹೂಡಿಕೆದಾರರು ಷೇರುಮಾರುಕಟ್ಟೆಯಿಂದ -ಠಿ; 4,159 ಕೋಟಿ ಹಾಗೂ ಬಾಂಡ್ ಮಾರುಕಟ್ಟೆಯಿಂದ -ಠಿ; 8,997 ಕೋಟಿ ಹಿಂಪಡೆದಿದ್ದಾರೆ.

ಕಚ್ಚಾ ತೈಲ ಬೆಲೆ ಶೇ.31 ಕುಸಿತ

ತೈಲ ರಫ್ತು ರಾಷ್ಟ್ರಗಳು ಒಟ್ಟಾಗಿ ನಿರ್ವಿುಸಿಕೊಂಡಿರುವ ವೇದಿಕೆ (ಒಪೆಕ್) ಉತ್ಪಾದನಾ ಕಡಿತ ಒಪ್ಪಂದವನ್ನು ಒಪ್ಪದೆ ರಷ್ಯಾ ಮತ್ತು ಸೌದಿ ಅರೇಬಿಯಾ ದರಸಮರಕ್ಕಿಳಿದಿರುವ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ.31 ಕುಸಿತ ಕಂಡು ಬಂದಿದೆ.

ಇದು 1991ರ (ಕೊಲ್ಲಿ ಯುದ್ಧ) ಬಳಿಕ ಉಂಟಾದ ಒಂದೇ ದಿನದ ಅತಿ ದೊಡ್ಡ ಇಳಿಕೆಯಾಗಿದೆ. ತೈಲ ಉತ್ಪಾದನೆಯನ್ನು 15 ಲಕ್ಷ ಬ್ಯಾರೆಲ್ ಕಡಿತ ಮಾಡುವ ಒಪ್ಪಂದಕ್ಕೆ ಒಪೆಕ್ ಮುಂದಾಗಿತ್ತು. ಆದರೆ, 14 ಸದಸ್ಯ ರಾಷ್ಟ್ರಗಳಲ್ಲಿ ಮೊದಲಿಗೆ ರಷ್ಯಾ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಈಗ ಸೌದಿ ಅರೇಬಿಯಾ ಕೂಡ ಒಪೆಕ್ ಪ್ರಸ್ತಾವನೆ ವಿರುದ್ಧವಾಗಿ ಪ್ರತಿದಿನ ಉತ್ಪಾದನೆ ಹೆಚ್ಚಿಸುತ್ತಿದೆ. ಇದರಿಂದಾಗಿ ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿ ಪ್ರತಿ ಬ್ಯಾರೆಲ್​ಗೆ 31.02 ಡಾಲರ್​ಗೆ ಇಳಿದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಅದು 20 ಡಾಲರ್ ತಲುಪುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪೆಟ್ರೋಲ್, ಡೀಸೆಲ್ ಅಗ್ಗ

ಕರೊನಾ ಆತಂಕದ ನಡುವೆಯೇ ಸೌದಿ ಹಾಗೂ ರಷ್ಯಾ ನಡುವಿನ ಪೈಪೋಟಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚಾ ್ಚೈಲದ ಬೆಲೆ ಶೇ.31 ಇಳಿಕೆ ಕಂಡಿದೆ. ಇದರ ಪರಿಣಾಮ ಭಾರತದಲ್ಲೂ ಗೋಚರಿಸಲಿದೆ. ಸೋಮವಾರವೂ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಪೆಟ್ರೋಲ್ ಬೆಲೆ 24 ಪೈಸೆ ಹಾಗೂ ಡೀಸೆಲ್ 25 ಪೈಸೆ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ 31.02 ಡಾಲರ್ ಇರುವ ಬ್ಯಾರಲ್ ಕಚ್ಚಾ ತೈಲ ಬೆಲೆ 20 ಡಾಲರ್​ಗೆ ಇಳಿಕೆ ಆಗಬಹುದೆನ್ನಲಾಗಿದೆ.

ಜಾಗತಿಕ ಪತನ: ಷೇರುಪೇಟೆ ಪತನ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಸಾಗರೋತ್ತರ ಎಲ್ಲ ದೇಶಗಳ ಮಾರುಕಟ್ಟೆಯಲ್ಲೂ ಕುಸಿತ ಕಂಡು ಬಂದಿದೆ. ಜಪಾನ್​ನ ನಿಕ್ಕಿ ಸೋಮವಾರ ಶೇ. 5.2 ಕುಸಿತ ಕಂಡಿದ್ದು, ಆಸ್ಟ್ರೇಲಿಯಾದ ಸರಕು ಮಾರುಕಟ್ಟೆ ಶೇ.6.4, ಬ್ರಿಟನ್​ನ ಎಫ್​ಟಿಎಸ್​ಇ 418 ಅಂಶ ಕುಸಿತ ಕಂಡಿದೆ.

ಬಂಗಾರ ತುಟ್ಟಿ, ಬೆಳ್ಳಿ ಅಗ್ಗ

ಚಿನಿವಾರ ಪೇಟೆಯಲ್ಲಿ ಸೋಮವಾರ ಬಂಗಾರದ ದರ 10 ಗ್ರಾಂಗೆ -ಠಿ; 22 ಏರಿಕೆಯಾಗಿ ಅಪರಂಜಿ ಚಿನ್ನ -ಠಿ; 45,063 ತಲುಪಿದೆ. ಬೆಳ್ಳಿ ಬೆಲೆ ಬೆಲೆ -ಠಿ; 710 ಇಳಿಕೆಯಾಗಿ ಪ್ರತಿ ಕೆ.ಜಿ.ಗೆ -ಠಿ; 47,359ಕ್ಕೆ ತಗ್ಗಿದೆ.

ರೂಪಾಯಿ ಮೌಲ್ಯ ಕುಸಿತ

ಷೇರು ಮಾರುಕಟ್ಟೆ ಪತನದ ಪರಿಣಾಮ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ 30 ಪೈಸೆ ಕುಸಿತವಾಗಿ 74.17 ರೂಪಾಯಿ ಮುಟ್ಟಿದೆ. 73.99 ರೂಪಾಯಿರಿಂದ ದಿನದ ವಹಿವಾಟು ಆರಂಭಿಸಿದ ರೂಪಾಯಿ ಮಧ್ಯದಲ್ಲಿ  73.85 ರೂಪಾಯಿ ರವರೆಗೆ ಏರಿಕೆಯಾಗಿತ್ತು.  74.17 ರೂಪಾಯಿಗೆ ಸ್ಥಿರಗೊಂಡಿದೆ.

ಜಿಡಿಪಿ ದರ ಶೇ.5.3ಕ್ಕೆ ಇಳಿಕೆ

ಕರೊನಾ ವೈರಸ್​ನ ಪರಿಣಾಮದಿಂದಾಗಿ 2020ನೇ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಅಂದಾಜನ್ನು ಮೂಡಿ’ಸ್ ಶೇ.5.3ಕ್ಕೆ ಇಳಿಸಿದೆ. ಈ ಹಿಂದೆ ಇದನ್ನು ಶೇ.5.4ಕ್ಕೆ ಅಂದಾಜಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net