

ಹಾನಗಲ್ಲ: ಹಾನಗಲ್ಲ, ಹಿರೇಕೆರೂರ ಹಾಗೂ ಶಿಗ್ಗಾಂವಿ ತಾಲೂಕುಗಳಲ್ಲಿ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಕೇಂದ್ರ ತೆರೆಯಲಾಗುತ್ತಿದ್ದು, ಜಿಲ್ಲೆಗೆ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸುವ ಗುರಿ ನೀಡಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಬೆಂಬಲ ಬೆಲೆಯ ಭತ್ತ ಖರೀದಿಗೆ ರೈತರ ಹೆಸರು ನೋಂದಣಿಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ವಿಂಟಾಲ್ಗೆ 1868 ರೂ. ದರದಲ್ಲಿ ಭತ್ತವನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಖರೀದಿಸಲಾಗುತ್ತಿದೆ. ಭತ್ತವನ್ನು ರೈತರು ಸ್ಥಳೀಯವಾಗಿ ಮ್ಯಾಪಿಂಗ್ ಮಾಡಿದ ರೈಸ್ವಿುಲ್ಗಳಿಗೆ ಸಾಗಿಸಬೇಕು. ಸ್ಥಳೀಯವಾಗಿ ರೈಸ್ವಿುಲ್ಗಳಿಲ್ಲದಿದ್ದಲ್ಲಿ ಬೇರೆಡೆ ಭತ್ತದ ಸಾಗಿಸುವ ವೆಚ್ಚವನ್ನು ಇಲಾಖೆಯಿಂದ ಭರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು. ರೈತರು ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ನೀಡಿದರೆ ಭತ್ತ ಖರೀದಿಸಲು ಸಾಧ್ಯವಿದೆ ಎಂದರು.
ಪ್ರತಿ ಎಕರೆಗೆ 16 ಕ್ವಿಂಟಾಲ್ನಂತೆ, ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕೆಂಬ ಬೇಡಿಕೆ ಸಿಂಧನೂರು, ರಾಯಚೂರು ರೈತರುಗಳಿಂದಲೂ ವ್ಯಕ್ತವಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಯೊಂದಿಗೆ ರ್ಚಚಿಸಿ, ಕೇಂದ್ರ ಸರ್ಕಾರದ ಕೃಷಿ ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಭತ್ತ ಮಾರಾಟ ಮಾಡುವ ರೈತರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಫ್ರುಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಕಳೆದ ವರ್ಷ 26,754 ಕ್ವಿಂ. ಭತ್ತವನ್ನು 849 ರೈತರಿಂದ ಖರೀದಿಸಲಾಗಿತ್ತು. ಮಾರುಕಟ್ಟೆಗಿಂತಲೂ ಹೆಚ್ಚಿನ ದರ ರೈತರಿಗೆ ದೊರಕಿದೆ. ಎಲ್ಲ ರೈತರಿಗೂ ಹಣ ಸಂದಾಯ ಮಾಡಲಾಗಿದೆ ಎಂದರು.
ಸಂಸದ ಶಿವಕುಮಾರ ಉದಾಸಿ, ಸವಣೂರು ಎಸಿ ಅನ್ನಪೂರ್ಣ ಮುದುಕಮ್ಮನವರ, ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಶಿದ್ದಪ್ಪ ಬಂಗಾರೇರ, ಉಪಾಧ್ಯಕ್ಷೆ ಗೀತಾ ಕೋರಿ ಮಾಜಿ ಅಧ್ಯಕ್ಷರಾದ ಶೇಖಣ್ಣ ಮಹರಾಜಪೇಟ, ಬಿ.ಎಸ್. ಅಕ್ಕಿವಳ್ಳಿ, ಪದ್ಮನಾಭ ಕುಂದಾಪೂರ, ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಇತರರು ಇದ್ದರು.