ಚೀನಾ ಸಂಬಂಧ ಕಡಿದುಕೊಂಡು ವಾಪಸ್ ಬರ್ತಿದೆಯಾ ಪಬ್​ಜಿ?

PUBG Game
Published on

ನವದೆಹಲಿ: ಪ್ಲೇಯರ್​ ಅನ್​ನೋನ್ಸ್​ ಬ್ಯಾಟಲ್​ಗ್ರೌಂಡ್ಸ್​(ಪಬ್​ಜಿ) ಎಂಬ ಮೊಬೈಲ್ ಗೇಮ್ ಪರಿಚಯಿಸಿದ ದಕ್ಷಿಣ ಕೊರಿಯಾ ಮೂಲದ ಪಬ್​ಜಿ ಕಾರ್ಪೊರೇಶನ್​ ಚೀನಾ ಮೂಲದ ಟೆನ್ಸೆಂಟ್ ಗೇಮ್ಸ್​ ಜತೆಗಿನ ಸಂಬಂಧ ಕಡಿದುಕೊಂಡು ಭಾರತಕ್ಕೆ ಮರುಪ್ರವೇಶಿಸುವುದಕ್ಕೆ ಮುಂದಾಗಿದೆ. ಇತ್ತೀಚೆಗಷ್ಟೇ ಚೀನಾ ಜತೆಗೆ ಸಂಪರ್ಕ ಹೊಂದಿರುವ ಹಲವು ಆ್ಯಪ್​ಗಳನ್ನು ಭಾರತ ಸರ್ಕಾರ ನಿಷೇಧಿಸಿತ್ತು. ಆ ಪಟ್ಟಿಯಲ್ಲಿ ಪಬ್​ಜಿ ಕೂಡ ಇತ್ತು.

ಭಾರತದಲ್ಲಿನ ಪಬ್​​ಜಿ ಚಟುವಟಿಕೆಗೆ ಸಂಬಂಧಿಸಿದ ಸಂಪೂರ್ಣ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಳ್ಳಲು ಪಬ್​ಜಿ ಕಾರ್ಪೊರೇಶನ್​ ಮುಂದಾಗಿದೆ. ಆ ಮೂಲಕ ಭಾರತದಲ್ಲಿ ಜನಪ್ರಿಯ ಗೇಮ್ ಮತ್ತೊಮ್ಮೆ ಪ್ರವೇಶ ಪಡೆಯಲು ಮುಂದಾಗಿದೆ. ಭಾರತದಲ್ಲಿ ಇದಕ್ಕೆ ಹೆಚ್ಚಿನ ಸಂಖ್ಯೆಯ ಬಳಕೆದಾರರಿದ್ದರು. ಹೀಗಾಗಿ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಬ್​​ಜಿ ಕಾರ್ಪೊರೇಶನ್​, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾದ ಟೆನ್ಸೆಂಟ್​ ಗೇಮ್ಸ್ ಜತೆಗೆ ಪಾಲುದಾರಿಕೆಯನ್ನು ಬಿಟ್ಟು, ಪಬ್​ಜಿ ಗೇಮ್ಸ್​ಗೆ ಸಂಬಂಧಿಸಿದ ಸಂಪೂರ್ಣ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಳ್ಳುತ್ತಿರುವುದಾಗಿ ಹೇಳಿದೆ.

ಅಲ್ಲದೆ, ಭಾರತ ಸರ್ಕಾರ ಜಾರಿಗೊಳಿಸಿರುವ ಡೇಟಾ ಪ್ರೈವೆಸಿ, ಸೆಕ್ಯುರಿಟಿಯ ನಿಯಮಗಳನ್ನೂ ಪಾಲಿಸಲು ಕಾರ್ಪೊರೇಶನ್ ಬದ್ಧವಾಗಿದೆ. ಆ ಮೂಲಕ ಪಬ್​ಜಿ ಬಳಕೆದಾರರ ಬೇಡಿಕೆಯನ್ನು ಈಡೇರಿಸಲು ಕಂಪನಿ ಮುಂದಾಗಿದೆ. ಭಾರತ ಸರ್ಕಾರವೂ ಈ ನಿಟ್ಟಿನಲ್ಲಿ ಸಹಕರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಅದು ಹೇಳಿಕೊಂಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net