

ನವದೆಹಲಿ: ಪಿಂಚಣಿದಾರರು ಜೀವಂತವಿರುವ ಬಗ್ಗೆ ಪ್ರತಿ ವರ್ಷ ನವೆಂಬರ್ನಲ್ಲಿ ಸಲ್ಲಿಸಬೇಕಿರುವ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು (ಡಿಎಲ್ಸಿ) ಪಡೆಯಲು ಅಂಚೆ ಸಿಬ್ಬಂದಿ ಪಿಂಚಣಿದಾರರ ಮನೆ ಬಾಗಿಲಿಗೇ ಬರಲಿದ್ದಾರೆ. ಇದರಿಂದ, ಈ ಉದ್ದೇಶಕ್ಕಾಗಿ ಪಿಂಚಣಿದಾರರು ಬ್ಯಾಂಕ್ಗಳಿಗೆ ಅಲೆಯುವ ತಾಪತ್ರಯ ತಪ್ಪಲಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಈ ಉಪಕ್ರಮವನ್ನು ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು ಯಶಸ್ವಿಯಾಗಿ ಆರಂಭಿಸಿವೆ.
ಪೋಸ್ಟಮ್ಯಾನ್ಗಳು ಹಾಗೂ ಗ್ರಾಮೀಣ ಡಾಕ್ (ಅಂಚೆ) ಸೇವಕರ ಬೃಹತ್ ಜಾಲವನ್ನು ಬಳಸಿಕೊಂಡು ಮನೆ ಬಾಗಿಲಿಗೇ ಈ ಸೇವೆ ಒದಗಿಸಲು ಐಪಿಪಿಬಿ ಯೋಜನೆ ರೂಪಿಸಿದೆ. ಮನೆಯಲ್ಲಿದ್ದೇ ಬ್ಯಾಂಕ್ ಖಾತೆಯಿಂದ ಹಣ ವಾಪಸ್ ಪಡೆಯುವುದು ಸೇರಿದಂತೆ ಇತರ ಸೌಲಭ್ಯಕ್ಕೆ ಹೆಚ್ಚುವರಿಯಾಗಿ ಡಿಎಲ್ಸಿ ಸೇವೆಯಲ್ಲಿ ಒದಗಿಸಲಾಗುತ್ತದೆ.