

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ
ನಗರದ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಖರೀದಿಸಲು ಭಟ್ಕಳ ಹಾಗೂ ತಮಿಳುನಾಡಿನಿಂದ ವ್ಯಾಪಾರಸ್ಥರು ಬರುತ್ತಿದ್ದು, ಸ್ಥಳೀಯರಲ್ಲಿ ಕರೊನಾ ಸೋಂಕಿನ ಆತಂಕ ಹೆಚ್ಚಳವಾಗಿದೆ.
ನಿತ್ಯವೂ ನಸುಕಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾರುಕಟ್ಟೆಯಲ್ಲಿ ತರಕಾರಿ ಸವಾಲು ಮಾಡಲಾಗುತ್ತಿದೆ. ಈ ಭಾಗದಲ್ಲಿ ತುಂಗಭದ್ರಾ, ಕುಮುದ್ವತಿ ನದಿ ಹರಿಯುತ್ತಿರುವ ಕಾರಣ ಸುತ್ತಲಿನ ಗ್ರಾಮಸ್ಥರು ನೀರಾವರಿ ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆದು ಎಪಿಎಂಸಿಗೆ ತಂದು ಮಾರಾಟ ಮಾಡುತ್ತಾರೆ.
ಆದರೆ, ತರಕಾರಿ ಖರೀದಿಸಲು ಭಟ್ಕಳ ಹಾಗೂ ತಮಿಳುನಾಡಿನಿಂದಲೂ ಲಾರಿ, ಕ್ಯಾಂಟರ್ ತೆಗೆದುಕೊಂಡು ವ್ಯಾಪಾರಸ್ಥರು ಖರೀದಿಗಾಗಿ ಬರುತ್ತಿದ್ದಾರೆ. ಸವಾಲು ನಡೆಯುವ ಸಮಯದಲ್ಲಿ ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.
ಈಗಾಗಲೇ ಭಟ್ಕಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲೂ ಸೋಂಕಿತರ ಸಂಖ್ಯೆ ಏರುತ್ತಲಿದೆ. ಅಲ್ಲಿಂದಲೇ ಹೆಚ್ಚಿನ ವ್ಯಾಪಾರಸ್ಥರು ತರಕಾರಿ ಖರೀದಿಗೆ ಬರುತ್ತಿರುವುದು ಸ್ಥಳೀಯರಲ್ಲಿ ಸೋಂಕಿನ ಭೀತಿ ಹೆಚ್ಚಿಸಿದೆ. ಹೀಗಾಗಿ ಸ್ಥಳೀಯ ಜನತೆ ಮಾರುಕಟ್ಟೆಯಿಂದ ದೂರ ಸರಿಯುತ್ತಿದ್ದು, ಬೇರೆ ಜಿಲ್ಲೆ, ರಾಜ್ಯದ ವ್ಯಾಪಾಸ್ಥರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
ಹೊರ ಜಿಲ್ಲೆಯಿಂದ ಬರುವ ವಾಹನ ಹಾಗೂ ವ್ಯಾಪಾರಸ್ಥರಿಗೆ ಪೊಲೀಸರು, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಚಕ್ ಪೋಸ್ಟ್ಗಳಲ್ಲಿ ತಪಾಸಣೆ ನಡೆಸಿಯೇ ಬಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತರಕಾರಿ ಮಾರಾಟಕ್ಕಾಗಿ ಬೇರೆ ಜಿಲ್ಲೆ, ರಾಜ್ಯದವರು ಬರಬಹುದು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳಲಾಗುವುದು. ಬೇರೆ ಕಡೆಯಿಂದ ಬಂದ ಜನತೆಯಿಂದ ಇಲ್ಲಿಯ ವ್ಯಾಪಾರಸ್ಥರು ಜಾಗೃತಿ ವಹಿಸಬೇಕು. | ಬಸನಗೌಡ ಕೋಟೂರು ತಹಸೀಲ್ದಾರ್