

ನವದೆಹಲಿ: ಈರುಳ್ಳಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಮಿತಿ ವಿಧಿಸಿದ ಬೆನ್ನಲ್ಲೇ, ಈರುಳ್ಳಿ ದರ ಇಳಿಕೆಯಾಗಿದೆ. ಸಗಟು ದರ ಕೆ.ಜಿಗೆ 10 ರೂಪಾಯಿಗೆ ಇಳಿದಿದೆ. ಏಷ್ಯಾದ ಅತಿ ದೊಡ್ಡ ಸಗಟು ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಸಲ್ಗಾಂವ್ನಲ್ಲಿ ಒಂದು ಕೆ.ಜಿ ಈರುಳ್ಳಿ ದರ 46 ರೂಪಾಯಿಗೆ ಇಳಿಕೆ ಕಂಡಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುತ್ತಿದೆ.
ಚೆನ್ನೈನಲ್ಲಿ 76 ರೂ.ನಿಂದ 66 ರೂ., ಮುಂಬೈನಲ್ಲಿ 70 ರೂ., ಬೆಂಗಳೂರಿನಲ್ಲಿ 64 ರೂ.ಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಮಂಡಿಗಳಲ್ಲೂ ಈರುಳ್ಳಿ ಆವಕ ಪ್ರಮಾಣ ಹೆಚ್ಚಾಗಿದೆ. ಈರುಳ್ಳಿ ದರ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನಿನ ಮೇಲೆ ಅಕ್ಟೋಬರ್ 23ರಂದು ಮಿತಿ ಹೇರಿತ್ತು. ಚಿಲ್ಲರೆ ವ್ಯಾಪಾರಿಗಳಿಗೆ 2 ಟನ್ ಮತ್ತು ಸಗಟು ವ್ಯಾಪಾರಿಗಳಿಗೆ 25 ಟನ್ ಮಿತಿ ಹೇರಲಾಗಿತ್ತು.
ರಾಜ್ಯದಲ್ಲೂ ತಗ್ಗಿದ ದರ : ಮಂಗಳೂರಿನಲ್ಲಿ ಈರುಳ್ಳಿ ದರ ಇಳಿಕೆಯಾಗಿದೆ. ಸೋಮವಾರ ರಖಂ ಮಾರುಕಟ್ಟೆಯಲ್ಲಿ 64-68 ರೂ.ವರೆಗೆ ಮಾರಾಟವಾಗಿದೆ. ಕೆಲದಿನಗಳಿಂದ ಸರಬರಾಜು ಹೆಚ್ಚಾಗಿರುವುದರಿಂದ, ಬೇಡಿಕೆ ಕಡಿಮೆಯಾಗಿದ್ದು ದರದಲ್ಲಿಯೂ ಇಳಿಕೆಯಾಗಿದೆ. ಚಿಲ್ಲರೆ ವ್ಯಾಪಾರಿಗಳು 75 ರೂ.ನಿಂದ ಗರಿಷ್ಠ 90 ರೂ.ವರೆಗೆ ಮಾರಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ-ಪ್ರವಾಹದಿಂದ ಈರುಳ್ಳಿ ಬೆಲೆಯಲ್ಲಿ ಹೆಚ್ಚಳವಾಗುವ ಭೀತಿಯಿತ್ತು. ಕಳೆದ ವಾರ ರಖಂನಲ್ಲಿ ಗರಿಷ್ಠ 95 ರೂ.ವರೆಗೆ ದರ ಏರಿಕೆಯಾಗಿತ್ತು. ಚಿಲ್ಲರೆ ಮಾರಾಟದಲ್ಲೂ 110 ರೂ.ವರೆಗೆ ಬೆಲೆಯಿತ್ತು. ಆದರೆ ಬಳಿಕ ದರದಲ್ಲಿ ಏರಿಳಿಕೆಯಾಗಿದ್ದು, ಈ ವಾರ ಆರಂಭದಲ್ಲೇ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.