

ಬೆಂಗಳೂರು: ಒಂದತ್ತ ಇಂಧನ ಬೆಲೆ ಏರುತ್ತಲಿದ್ದರೆ ಇನ್ನೊಂದತ್ತ ಅದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಯಲಾರಂಭಿಸಿವೆ. ಪ್ರಸಿದ್ಧ ಕ್ಯಾಬ್ ಸೇವಾ ಸಂಸ್ಥೆಯಾದ ಓಲಾ ಕೂಡ ಎಲೆಕ್ಟ್ರಿಕ್ ಸ್ಕೂಟರ್ಗಳ ನಿರ್ಮಾಣಕ್ಕೆ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಹೆಚ್ಚಾಗುವ ವಿಶ್ವಾಸ ಮೂಡಿಸಿದೆ.
ಅಂದ ಹಾಗೆ ಓಲಾದ ಎಲೆಕ್ಟ್ರಿಕ್ ಸ್ಕೂಟರ್ನ ಮೊದಲ ತಯಾರಿಕಾ ಘಟಕವನ್ನು ತಮಿಳುನಾಡಿನ ಹೊಸೂರಿನಲ್ಲಿ ಉದ್ಘಾಟಿಸಲಾಗಿದೆ. ವಿಶೇಷವೆಂದರೆ ಸಂಸ್ಥೆಯ ಎಲ್ಲ ಎಲೆಕ್ಟ್ರಿಕ್ ಸ್ಕೂಟರ್ಗಳು ಭಾರತದಲ್ಲೇ ತಯಾರಾಗಿ ವಿವಿಧ ದೇಶಗಳಿಗೆ ರಫ್ತಾಗಲಿದೆ. ಹೊಸೂರಿನಲ್ಲಿ ಆರಂಭವಾಗಿರುವ ತಯಾರಿಕಾ ಘಟಕದಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾದಂತಾಗಿದೆ. 5 ಸಾವಿರ ರೋಬೊಗಳನ್ನೂ ಕೆಲಸಕ್ಕೆ ತೊಡಗಿಸಿಕೊಳ್ಳಿಸುವುದಾಗಿ ಸಂಸ್ಥೆ ತಿಳಿಸಿದೆ. ಸುಮಾರು 500 ಎಕರೆ ಜಾಗದಲ್ಲಿ ಉತ್ಪಾದನಾ ಕೇಂದ್ರವನ್ನು ನಿರ್ಮಿಸಲಾಗಿದ್ದು, ಒಂದು ವರ್ಷದಲ್ಲಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಅಂದರೆ ಪ್ರತಿ 2 ಸೆಕೆಂಡಿಗೆ ಒಂದು ಸ್ಕೂಟರ್ ಸಿದ್ಧವಾಗಿ ನಿಲ್ಲಲಿದೆ.
ನೆದರ್ಲ್ಯಾಂಡ್ ಮೂಲದ ಎಟರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕೇಂದ್ರದೊಂದಿಗೆ ಓಲಾ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಇವಿ ಸ್ಕೂಟರ್ಗಳ ಉತ್ಪಾದನೆಗೆಂದು ಆರಂಭಿಕವಾಗಿ 2,400 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಸದ್ಯದ ಮಟ್ಟಿಗೆ ಸ್ಕೂಟರ್ಗೆ ಮಾತ್ರ ಯೋಜನೆ ಸೀಮಿತವಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ಬೇರೆಯ ವಾಹನಗಳನ್ನೂ ತಯಾರಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ. (ಏಜೆನ್ಸೀಸ್)