ಲಾಕ್​ಡೌನ್ ಹಿನ್ನೆಲೆ ಭಾರತದಲ್ಲಿ ಇಂಧನ ಬೇಡಿಕೆ ಭಾರಿ ಇಳಿಕೆ

Petrol 10 Feb 20
Published on

ನವದೆಹಲಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಭಾರತದಲ್ಲಿ ತೈಲ ಬೇಡಿಕೆ ಶೇ. 70 ಕುಸಿದಿದೆ. ಇದರಿಂದಾಗಿ ತೈಲ ಉತ್ಪಾದನೆ ದೇಶಗಳು ಭಾರಿ ನಷ್ಟ ಅನುಭವಿಸುತ್ತಿವೆ. ಇಡೀ ತಿಂಗಳ ತೈಲ ಬಳಕೆ ಕಳೆದ ವರ್ಷದ ಸರಾಸರಿ ಮಟ್ಟಕ್ಕಿಂತ ಶೇ. 50 ಕಡಿಮೆಯಾಗಬಹುದು. ರಾಷ್ಟ್ರವ್ಯಾಪಿ ಲಾಕ್​ಡೌನ್​ನ ಆಧಾರದಲ್ಲಿ ಇದನ್ನು ಲೆಕ್ಕ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ದಿನ 3.1 ಮಿಲಿಯನ್ ಬ್ಯಾರಲ್ ತೈಲ ಬೇಡಿಕೆ ಕಡಿಮೆಯಾಗಿದೆ ಎಂದು ಬ್ಲೂಮ್​ಗ್ ಅಂಕಿ ಅಂಶ ತಿಳಿಸಿದೆ. ಇದರಲ್ಲಿ ಭಾರತವೊಂದರ ಪಾಲು ಮೂರನೇ ಒಂದರಷ್ಟಾಗುತ್ತದೆ.

‘ಇದೊಂದು ಅಭೂತಪೂರ್ವ ಸನ್ನಿವೇಶವಾಗಿದೆ. ನನ್ನ ಇಡೀ ಜೀವನದಲ್ಲಿ ಇಂಥ ಪರಿಸ್ಥಿತಿಯನ್ನು ಕೇಳಿಯೂ ಇಲ್ಲ, ಕಂಡೂ ಇಲ್ಲ’ ಎಂದು ಭಾರತದ ಅತ್ಯಂತ ದೊಡ್ಡ ತೈಲ ಉತ್ಪಾದಕ ಸಂಸ್ಥೆಯಾದ ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ (ಒಎನ್​ಜಿಸಿ) ಮಾಜಿ ಅಧ್ಯಕ್ಷ ಆರ್.ಎಸ್. ಶರ್ಮಾ ಹೇಳಿದ್ದಾರೆ. ಶರ್ಮಾ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಒಎನ್​ಜಿಸಿ ಸಾರಥ್ಯ ವಹಿಸಿದ್ದರು. ಮೂರು ವಾರಗಳ ಲಾಕ್​ಡೌನ್ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಬಿಕ್ಕಟ್ಟಿಗೆ ಸಿಲುಕಿದೆ. ಆದರೆ, ವೈರಸ್ ಮೂಲವಾದ ಚೀನಾದಲ್ಲಿ ಇಂಧನಕ್ಕೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದ್ದು ಅದು ಜಾಗತಿಕ ತೈಲೋದ್ಯಮಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ನೀಡುವ ಸಾಧ್ಯತೆ ಇದೆ.

ಇಂಡಿಯನ್ ಆಯಿಲ್ ಕಾರ್ಪೆರೇಷನ್​ನ (ಐಒಸಿ) ಬೇಡಿಕೆ ಬೇಡಿಕೆ ಕೇವಲ ಶೇ. 30ಕ್ಕೆ ಇಳಿಕೆಯಾಗಿದೆ. ಲಾಕ್​ಡೌನ್​ನಿಂದಾಗಿ ಭಾರತದ ರಸ್ತೆಗಳು ಬಿಕೋ ಎನ್ನುತ್ತಿವೆ. ಕಾರ್ಖಾನೆಗಳು ಮುಚ್ಚಿವೆ. ಸರಕು ಸಾಗಾಟ ಕಡಿಮೆಯಾಗಿದೆ. ಇವೆಲ್ಲದರ ಕಾರಣ ಇಂಧನ ಬೇಡಿಕೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net