ಮೇ 3ರವರೆಗೆ ಯಾವುದೇ ವಿಮಾನಗಳ ಸಂಚಾರವಿಲ್ಲ: ಲಾಕ್‌ಡೌನ್‌ ವಿಸ್ತರಣೆ ಹಿನ್ನೆಲೆಯಲ್ಲಿ ಆದೇಶ

Air India
Published on

ನವದೆಹಲಿ: ದೇಶಾದ್ಯಂತ ಲಾಕ್‌ಡೌನ್‌ ಅವಧಿಯನ್ನು ಮೇ 3ರವರೆಗೆ ಮುಂದುವರೆಸಿರುವ ಹಿನ್ನೆಲೆಯಲ್ಲಿ ಭಾರತದಿಂದ ಹೋಗುವ ಎಲ್ಲ ವಿಮಾನಗಳ ಹಾರಾಟವನ್ನು ಅಲ್ಲಿಯವರೆಗೆ ಸ್ಥಗಿತಗೊಳಿಸಲಾಗಿದೆ.ದೇಶೀಯ (ಡೊಮೆಸ್ಟಿಕ್‌) ಮತ್ತು ಅಂತಾರಾಷ್ಟ್ರೀಯ (ಇಂಟರ್‌ನ್ಯಾಷನಲ್‌) ವಿಮಾನಗಳ ಹಾರಾಟದ ಸ್ಥಗಿತವನ್ನು ಮೇ 3ವರೆಗೆ ಮುಂದುವರೆಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಮೊದಲು ನಿಗದಿಯಾದಂತೆ ಇಂದಿನವರೆಗೆ (ಏಪ್ರಿಲ್‌ 14) ಲಾಕ್‌ಡೌನ್‌ ಆದೇಶ ಜಾರಿಯಲ್ಲಿತ್ತು. ಆದ್ದರಿಂದ ವಿಮಾನಗಳ ಹಾರಾಟವನ್ನು ಇಂದು ಮಧ್ಯರಾತ್ರಿಯಿಂದ ಪುನರಾರಂಭಿಸುವ ಸಾಧ್ಯತೆಗಳ ಬಗ್ಗೆ ಕೇಂದ್ರ ಹೇಳಿತ್ತು. ಆದರೆ ಕರೊನಾ ವೈರಸ್‌ ಪರಿಸ್ಥಿತಿ ಕೈಮೀರಿ ಹೋಗಿರುವ ಕಾರಣ, ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಿಮಾನಗಳ ಹಾರಾಟ ಕೂಡ ನಡೆಯುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಲಾಕ್‌ಡೌನ್‌ ಜಾರಿಯಾದ ನಂತರ ಭಾರತ ಮೊದಲಿಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು. ಸೋಂಕಿನ ಪ್ರಮಾಣದ ಮೂಲ ಕಾರಣಗಳಲ್ಲಿ ಇದೂ ಒಂದು ಎನ್ನುವ ಕಾರಣಕ್ಕೆ ಕೂಡಲೇ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆನಂತರ ದೇಶೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಎರಡೂ ವಿಮಾನಗಳ ಹಾರಾಟ ಸ್ಥಗಿತವನ್ನು ಮೇ 3ರವರೆಗೆ ಮುಂದೂಡಲಾಗಿದೆ. ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಮುಂದಿನ ನಿರ್ಧಾರದ ಬಗ್ಗೆ ತಿಳಿಸಲಾಗುವುದು ಎಂದು ಸಚಿವಾಲಯ ಹೇಳಿದೆ. (ಏಜನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net