

ಹಿಂದೆಲ್ಲ ಶಾಲೆಗೆ ಹೋಗದವರು, ಅರ್ಧಕ್ಕೆ ಓದು ನಿಲ್ಲಿಸಿದವರು ಜೀವನಕ್ಕಾಗಿ ಕೃಷಿಯನ್ನೇ ಆಧಾರ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಹೆಚ್ಚು ಓದಿದವರು, ಡಿಗ್ರಿ ಪಡೆದವರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಈ ಸಂಪ್ರದಾಯ ಹೆಚ್ಚಾಗುತ್ತಿದ್ದು, ಇಂಜಿನಿಯರಿಂಗ್ ಮತ್ತು ಸೂಕ್ಷ್ಮ ಜೀವಾಣುಶಾಸ್ತ್ರ ಓದಿರುವ ನಾಲ್ವರು ಪದವೀಧರರು ಧಾರವಾಡ ತಾಲೂಕಿನ ಕೆಲಗೇರಿ ಗ್ರಾಮದಲ್ಲಿ ಚಿಪ್ಪು ಅಣಬೆ (ಪ್ಲುರೋಟಸ್ ಸಾಜೋರಕಾಜು) ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಧಾರವಾಡದ ನರಸನಗೌಡ ವೀರಾಪುರ, ಪ್ರಕಾಶ ವೀರಾಪುರ, ವರುಣ ವಿಶ್ವನಾಥ ಮತ್ತು ಹುಬ್ಬಳ್ಳಿಯ ವಿಶಾಲಕುಮಾರ ಮಠ ಎಂಬುವವರು ಚಿಪ್ಪು ಅಣಬೆ (ಆಯಸ್ಟರ್ ಮಶ್ರೂಂ) ಬೆಳೆದಿದ್ದಾರೆ. ಚಿಪ್ಪು ಅಣಬೆ ಕೃಷಿ ಅತಿ ಸರಳ. ಕಡಿಮೆ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಕೃಷಿ ತ್ಯಾಜ್ಯಗಳಾದ ಭತ್ತ ಅಥವಾ ಗೋಧಿ ಹುಲ್ಲು ಬಳಸಿ ಇದನ್ನು ಬೆಳೆಯಬಹುದು. ಸದ್ಯ ನಿತ್ಯ 20 ಕೆಜಿಯಂತೆ ತಿಂಗಳಿಗೆ 600 ಕೆಜಿ ಅಣಬೆ ಇಳುವರಿ ಬರುತ್ತಿದೆ. 240 ರೂ.ಗೆ ಕೆಜಿಯಂತೆ ಮಾರಾಟ ಮಾಡಿದರೆ 1.44 ಲಕ್ಷ ರೂ. ಸಿಗುತ್ತದೆ. ಅದರಲ್ಲಿ 40 ಸಾವಿರ ರೂ. ಖರ್ಚು ಕಳೆದು ಪ್ರತಿ ತಿಂಗಳು 1 ಲಕ್ಷ ರೂ. ಲಾಭ ಸಿಗುತ್ತಿದೆ.
ಅಣಬೆ ಬೀಜಗಳನ್ನು ಶಿವಮೊಗ್ಗದ ಸರ್ಕಾರಿ ಜೈವಿಕ ಕೇಂದ್ರದಿಂದ 80 ರೂ.ಗೆ ಒಂದು ಕೆಜಿಯಂತೆ ಖರೀದಿಸುತ್ತಾರೆ. ಪ್ರತಿ ತಿಂಗಳಿಗೆ 120 ಕೆಜಿ ಬಿತ್ತನೆ ಮಾಡುತ್ತಾರೆ. 50 ದಿನಗಳಲ್ಲಿ ಪೂರ್ಣ ಇಳುವರಿ ಪಡೆಯಲಾಗುತ್ತದೆ. ಕಟಾವು ಮಾಡಿದ ಅಣಬೆಗಳನ್ನು ಪೊಟ್ಟಣಗಳಲ್ಲಿ 200 ಗ್ರಾಂ, ಅರ್ಧ ಕೆಜಿ, 1 ಕೆಜಿಯಂತೆ ಪ್ಯಾಕ್ ಮಾಡಿ ಮಾರುಕಟ್ಟೆಗೆ ಸಾಗಿಸುತ್ತಾರೆ. ತಾಜಾ ಚಿಪ್ಪು ಅಣಬೆಗಳ ಬಾಳಿಕೆ ಕಾಲ 24 ತಾಸು ಆಗಿರುತ್ತದೆ. ಇದೇ ಅಣಬೆಗಳನ್ನು ಪ್ರಖರವಾದ ಸೂರ್ಯನ ಬೆಳಕಿನಲ್ಲಿ ಎರಡ್ಮೂರು ದಿನ ಒಣಗಿಸಿ ಶೇಖರಿಸಿಟ್ಟುಕೊಳ್ಳಬಹುದು. ಈ ಅಣಬೆಗಳನ್ನು ವರ್ಷದವರೆಗೆ ಬಳಸಬಹುದು.
2019-20ರಲ್ಲಿ ಸಣ್ಣ ಪ್ರಮಾಣದಲ್ಲಿ ಅಣಬೆ ಕೃಷಿ ಮಾಡಲು ಆರಂಭಿಸಿದೆವು. ಆಗ ಕರೊನಾ ಬಂದಿದ್ದರಿಂದ ಬೇರೆಡೆ ಕಳುಹಿಸುವುದು ಬಂದ್ ಆಯಿತು. ಅನಿವಾರ್ಯವಾಗಿ ಅಣಬೆಗೆ ಕಲ್ಲಂಗಡಿ ಬೀಜ ಸೇರಿಸಿ ಜಾಮ್ ತಯಾರಿಸಲಾಯಿತು. ಅದೇ ರೀತಿ ಕಸ್ತೂರಿ ಬೀಜ, ಫೈನಾಪಲ್, ಕಸಕಸಿ, ಸೇವಂತಿ ಹಾಗೂ ಗುಲಾಬಿ ಹೂವಿನ ಪಕಳಿ ಸೇರಿಸಿ ಜಾಮ್ ಮಾಡಿ ಮಾರಾಟ ಮಾಡಲಾಯಿತು. ಆಗ ಗ್ರಾಹಕರಿಂದ ಉತ್ತಮ ಬೇಡಿಕೆಯೂ ಬಂತು. ಮುಂದಿನ ದಿನಗಳಲ್ಲಿ ಉಪ್ಪಿನಕಾಯಿ, ಸೂಪ್ ಪೌಡರ್, ಜಾಮ್ ಸಾಂಬಾರ ಪೌಡರ್, ಬಿಸ್ಕತ್ ಮಾಡುವ ಯೋಚನೆ ಇದೆ ಎನ್ನುತ್ತಾರೆ ವರುಣ ವಿಶ್ವನಾಥ.
2019-20ರಲ್ಲಿ ಅಣಬೆ ಕೃಷಿ ಮಾಡಲು ನರಸನಗೌಡ ಅವರು 20 ಲಕ್ಷ ರೂ. ವೆಚ್ಚದಲ್ಲಿ ಅಣಬೆ ಕೃಷಿ ಘಟಕ ನಿರ್ವಿುಸಿಕೊಂಡಿದ್ದರು. ಅವರಿಗೆ ರಾಷ್ಟ್ರೀಯ ತೋಟಗಾರಿಕೆ ಯೋಜನೆಯಡಿ 8 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಯುವ ಮತ್ತು ಆಸಕ್ತ ರೈತರು ಇಂಥ ಹೊಸ ಬೆಳೆ ಬೆಳೆಯಲು ಮುಂದಾಗಬೇಕು. | ಇಮ್ತಿಯಾಜ್ ಚೆಂಗಾಪುರಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಧಾರವಾಡ ಸ್ವಂತ ಉದ್ಯಮ ಅದರಲ್ಲೂ ಸ್ವ-ಉದ್ಯೋಗ ಮಾಡುವ ಗುರಿ ಇತ್ತು. ಅದರಂತೆ ಅಣಬೆ ಬೇಸಾಯದಲ್ಲಿ ತೊಡಗಿದ್ದೇನೆ. ಅಣಬೆ ಯಿಂದ ಉಪ ಉತ್ಪನ್ನ ತಯಾರಿಸುವ ಯೋಜನೆ ಇದೆ. ವಾಣಿಜ್ಯಿಕವಾಗಿ ಬೆಳೆದು ವಿದೇಶಗಳಿಗೆ ರಫ್ತು ಮಾಡುವ ಚಿಂತನೆಯೂ ಇದೆ. | ವರುಣ ವಿಶ್ವನಾಥ ಅಣಬೆ ಬೆಳೆಗಾರ ಮುಂಬರುವ ದಿನಗಳಲ್ಲಿ ಅಣಬೆ ಕೃಷಿಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಇದೆ. ಪಿಎಂ ಎಫ್ಎಂಇ ಯೋಜನೆಯಡಿ 30 ಲಕ್ಷ ರೂ. ಸಂಸ್ಕರಣ ಘಟಕ ನಿರ್ವಿುಸಲು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಘಟಕ ನಿರ್ವಿುಸಿದ ಬಳಿಕ ಸುತ್ತಮುತ್ತಲಿನ ಆಸಕ್ತ ರೈತರು ಅಣಬೆ ಬೆಳೆದು ನಮಗೆ ನೀಡಬಹುದು. | ನರಸನಗೌಡ ವೀರಾಪುರ ಅಣಬೆ ಬೆಳೆಗಾರ