

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮುಖ್ಯಸ್ಥ ಮುಕೇಶ್ ಅಂಬಾನಿ ( Mukesh Ambani ) ಅವರು ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಮತ್ತೊಮ್ಮೆ ಮೈಲಿಗಲ್ಲು ಸಾಧಿಸಿದ್ದಾರೆ. ಟಿಕ್‌ಟಾಕ್‌ನ ಮಾತೃ ಸಂಸ್ಥೆ 'ಬೈಟ್‌ಡ್ಯಾನ್ಸ್' ಸಹ-ಸಂಸ್ಥಾಪಕ ಝಾಂಗ್ ಯಿಮಿಂಗ್ ಅವರನ್ನು ಹಿಂದಿಕ್ಕಿ ಏಷ್ಯಾದ ನಂಬರ್ 1 ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅಂಬಾನಿ ಪಾತ್ರರಾಗಿದ್ದಾರೆ
ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ರಿಲಯನ್ಸ್ ಷೇರುಗಳ ಅಭೂತಪೂರ್ವ ಏರಿಕೆಯಿಂದಾಗಿ ಮುಕೇಶ್ ಅಂಬಾನಿ ಅವರ ಒಟ್ಟು ಸಂಪತ್ತು ಶೇ. 10.5 ರಷ್ಟು ಜಿಗಿತ ಕಂಡು 88.8 ಬಿಲಿಯನ್ ಡಾಲರ್‌ಗೆ (ಅಂದಾಜು 7.4 ಲಕ್ಷ ಕೋಟಿ ರೂ.ಗೂ ಹೆಚ್ಚು) ತಲುಪಿದೆ. ಪ್ರಸ್ತುತ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ 22ನೇ ಸ್ಥಾನಕ್ಕೇರಿದ್ದರೆ, 84 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಝಾಂಗ್ ಯಿಮಿಂಗ್ 25ನೇ ಸ್ಥಾನಕ್ಕೆ ಹಾಗೂ 80.1 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅದಾನಿ ಗ್ರೂಪ್ ಉದ್ಯಮಿ ಗೌತಮ್ ಅದಾನಿ 26ನೇ ಸ್ಥಾನದಲ್ಲಿದ್ದಾರೆ.
ರಿಲಯನ್ಸ್ ಸಮೂಹ ಸಂಸ್ಥೆಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತನ್ನ ಸಾರ್ವಕಾಲಿಕ ಅತ್ಯುತ್ತಮ ಆರ್ಥಿಕ ಸಾಧನೆಯನ್ನು ದಾಖಲಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಮೌಲ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ರಿಲಯನ್ಸ್‌ನ ತೈಲದಿಂದ ರಾಸಾಯನಿಕ (O2C) ಉದ್ಯಮ, ಡಿಜಿಟಲ್ ಸೇವೆಗಳು ಹಾಗೂ ರಿಟೇಲ್ ರಂಗದ ಭರ್ಜರಿ ಪ್ರಗತಿಯಿಂದಾಗಿ ಕಂಪನಿಯ ಕ್ರೋಡೀಕೃತ ಆದಾಯವು ವಾರ್ಷಿಕ ಆಧಾರದ ಮೇಲೆ ಶೇ. 28 ರಷ್ಟು ಏರಿಕೆಯಾಗಿ 3.62 ಲಕ್ಷ ಕೋಟಿಯ ದಾಖಲೆ ಮಟ್ಟ ತಲುಪಿದೆ. ಇಷ್ಟೇ ಅಲ್ಲದೆ ಕಂಪನಿಯ ಕಾರ್ಯಾಚರಣೆಯ ಲಾಭ (EBITDA) ಶೇ. 24 ರಷ್ಟು ಹೆಚ್ಚಾಗಿ 62,409 ಕೋಟಿ ರೂ.ಗೆ ಹಾಗೂ ನಿವ್ವಳ ಲಾಭವು ಶೇಕಡಾ 34 ರಷ್ಟು ಜಿಗಿದು 29,550 ಕೋಟಿ ರೂ. ತಲುಪುವ ಮೂಲಕ ಇತಿಹಾಸ ಬರೆದಿದೆ.
ವಿಶೇಷವಾಗಿ ರಿಲಯನ್ಸ್‌ನ ತೈಲ-ರಾಸಾಯನಿಕ (O2C) ವಿಭಾಗವು ಮುಂಚೂಣಿಯಲ್ಲಿದ್ದು, ವಾರ್ಷಿಕ ಶೇ. 44.2 ರಷ್ಟು ಆದಾಯದ ಬೆಳವಣಿಗೆಯೊಂದಿಗೆ 2.32 ಲಕ್ಷ ಕೋಟಿ ರೂ. ಗಳಿಸಿದೆ. ಇಂಧನ ಸಂಸ್ಕರಣೆಯ ಮೌಲ್ಯವನ್ನು ಅಳೆಯುವ ಟ್ರಾನ್ಸ್‌ಪೋರ್ಟೇಶನ್ ಫ್ಯುಯೆಲ್ ಕ್ರಾಕ್ಸ್ ದರಗಳು ಹಿಂದಿನ ವರ್ಷಕ್ಕಿಂತ 3 ರಿಂದ 3.7 ಪಟ್ಟು ಹೆಚ್ಚಾಗಿದ್ದು, ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಈ ಅತ್ಯುತ್ತಮ ಆರ್ಥಿಕ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಜಾಗತಿಕ ಹೂಡಿಕೆ ವಿಶ್ಲೇಷಣಾ ಸಂಸ್ಥೆ ಅವೆಂಡಸ್ ಸ್ಪಾರ್ಕ್ (Avendus Spark) ರಿಲಯನ್ಸ್ ಷೇರುಗಳ ರೇಟಿಂಗ್ ಅನ್ನು ಹೆಚ್ಚಿಸಿದೆ. ಇದರೊಂದಿಗೆ, ಬ್ಲೂಮ್‌ಬರ್ಗ್ ವರದಿಯ ಪ್ರಕಾರ 2017ರ ನಂತರ ಇದೇ ಮೊದಲ ಬಾರಿಗೆ ರಿಲಯನ್ಸ್ ಷೇರುಗಳ ಮೇಲೆ ಯಾವುದೇ ವಿಶ್ಲೇಷಕರು ಮಾರಾಟ (Sell) ಅಥವಾ ಹಿಡಿದಿಟ್ಟುಕೊಳ್ಳುವ (Hold) ನಕಾರಾತ್ಮಕ ಶಿಫಾರಸುಗಳನ್ನು ನೀಡದಿರುವುದು ಪ್ರಮುಖ ಅಂಶವಾಗಿದೆ.
ಈ ಐತಿಹಾಸಿಕ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಮುಕೇಶ್ ಅಂಬಾನಿ ನಿಯಂತ್ರಣದಲ್ಲಿರುವ 'ಜಿಯೋ ಪ್ಲಾಟ್‌ಫಾರ್ಮ್ಸ್' (Jio Platforms) ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ್ದು. ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ಅಕ್ಟೋಬರ್ 28 ರಂದು ಸಾರ್ವಜನಿಕವಾಗಿ ಲಿಸ್ಟ್ ಆದ ಜಿಯೋ ಷೇರುಗಳು ಮೊದಲ ದಿನವೇ ಶೇ. 27 ರಷ್ಟು ಭರ್ಜರಿ ಜಿಗಿತ ಕಂಡವು. ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ (IPO) ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಐಪಿಒ ಆಗಿದ್ದು, ಸುಮಾರು 106 ಬಿಲಿಯನ್ ಡಾಲರ್ ಮೌಲ್ಯಮಾಪನದಲ್ಲಿ 3.2 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಪ್ರಸ್ತುತ ದೇಶದ ಬೃಹತ್ ಟೆಲಿಕಾಂ ಸಂಸ್ಥೆಯಾಗಿರುವ ಜಿಯೋದಲ್ಲಿ ಶೇ. 66 ರಷ್ಟು ಪಾಲುದಾರಿಕೆಯನ್ನು ಕಾಯ್ದುಕೊಂಡಿದೆ.
1957 ರಲ್ಲಿ ಮುಕೇಶ್ ಅಂಬಾನಿ ಅವರ ತಂದೆ ಧೀರೂಭಾಯಿ ಅಂಬಾನಿ ಅವರಿಂದ ಸ್ಥಾಪಿಸಲ್ಪಟ್ಟ ರಿಲಯನ್ಸ್ ಇಂಡಸ್ಟ್ರೀಸ್, ಇಂದು 17.54 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದುವ ಮೂಲಕ ಭಾರತದ ನಂ.1 ಕಂಪನಿಯಾಗಿದೆ. ಜೂನ್ ಅಂತ್ಯದ ವೇಳೆಗೆ 533 ಮಿಲಿಯನ್‌ಗೂ ಹೆಚ್ಚು ಚಂದಾದಾರರನ್ನು ಹೊಂದುವ ಮೂಲಕ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ನೆಟ್‌ವರ್ಕ್ ಆಗಿದೆ. 2026ರ ಫೋರ್ಬ್ಸ್‌ನ ಜಾಗತಿಕ 2000 ಬೃಹತ್ ಸಾರ್ವಜನಿಕ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಪ್ರಪಂಚದಲ್ಲೇ 55ನೇ ಸ್ಥಾನ ಪಡೆದುಕೊಂಡಿದ್ದು, 119.7 ಬಿಲಿಯನ್ ಡಾಲರ್ ಮಾರಾಟ ಹಾಗೂ 9.1 ಬಿಲಿಯನ್ ಡಾಲರ್ ನಿವ್ವಳ ಲಾಭ ದಾಖಲಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತಿದೆ, (ಏಜೆನ್ಸೀಸ್).