

ರೈತರು ಕೃಷಿಯಿಂದ ಹೊರ ಬರಲು ಕಾರಣವೇನು? ನೀವು ಬಹುಶಃ ನೋಡಿರಬಹುದು, ಬಹಳಷ್ಟು ರೈತರು ವ್ಯವಸಾಯ ಬದಿಗಿಟ್ಟು ಬೇರೆ ವೃತ್ತಿಗೆ ತೆರಳುತಿದ್ದಾರೆ. ಕಾರಣ ಏನಿರಬಹುದು ಅಂತ ಕೇಳಿದರೆ ಅವರಿಂದ ಬರುವ ಉತ್ತರ, ‘ನಮ್ಮಲ್ಲಿರುವ ಕಡಿಮೆ ಭೂಮಿ ಅಥವಾ ಜಮೀನಿನಿಂದ ಎಷ್ಟು ಮಹಾ ಗಳಿಸೋಕೆ ಸಾಧ್ಯ? ಅದಕ್ಕಾಗಿ ನಾವು ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕು. ಅದೇ ಬೇರೆ ಕ್ಷೇತ್ರದಲ್ಲಿ ದುಡಿಮೆ ಮಾಡಿದರೆ ಒಂದಷ್ಟು ನಿರ್ದಿಷ್ಟ ಸಂಬಳವಾದ್ರೂ ಸಿಗುತ್ತೆ’ ಅನ್ನೋದು. ಬೆಂಗಳೂರಿನಂತಹ ಮಹಾನಗರಗಳಿಗೆ ಉದ್ಯೋಗ ಅರಸಿ ಓಲಾ, ಉಬರ್ ಚಾಲಕರಾಗಿಯೋ ಅಥವಾ ಡೆಲಿವರಿ ಏಜೆಂಟ್ಗಳಾಗಿಯೋ ಕೆಲಸಕ್ಕೆ ಸೇರಿರುವವರಲ್ಲಿ ಬಹುಪಾಲು ಜನರು ಕೃಷಿಯಲ್ಲಿ ಲಾಭವಿಲ್ಲವೆಂದು ತಮ್ಮ ಜಮೀನನ್ನು, ಹಳ್ಳಿಯನ್ನು ಬಿಟ್ಟು ಬಂದವರೆ ಹೆಚ್ಚು. ಕುಟುಂಬದ ಸದಸ್ಯರೆಲ್ಲರೂ ಸೇರಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಪರಿಶ್ರಮಪಟ್ಟರೆ, ತಿಂಗಳಿಗೆ ನಿಮ್ಮದೇ ಕೃಷಿ ಭೂಮಿಯಲ್ಲಿ ರಾಜನಂತೆ ದುಡಿಯುತ್ತ ತಿಂಗಳಿಗೆ ಒಂದು ಲಕ್ಷ ಆದಾಯ ಗಳಿಸಲು ಸಾಧ್ಯವಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ರೈತರು ತಮ್ಮ ಬಳಿ ಇರುವ ಅರ್ಧ ಎಕರೆ, ಒಂದು ಎಕರೆ ಜಮೀನಿನಲ್ಲೇ ಈ ರೀತಿಯ ಲಾಭದಾಯಕ ಕೃಷಿ ಮಾಡುತ್ತಿದ್ದಾರೆ.
ಕೃಷಿಯಿಂದ ಆರ್ಥಿಕತೆಗೆ ಸಿಗುತ್ತೆ ಮತ್ತಷ್ಟು ಬಲ: ನಮ್ಮ ದೇಶದ ಒಟ್ಟಾರೆ 138 ಕೋಟಿ ಜನಸಂಖ್ಯೆಯಲ್ಲಿ ಸರಾಸರಿ ಶೇ.58 ಜನಸಂಖ್ಯೆ ಕೃಷಿಯನ್ನು ಅವಲಂಬಿಸಿದ್ದಾರೆ. ಹೀಗಿದ್ದರೂ ನಮ್ಮ ದೇಶದ ಒಟ್ಟು ದೇಶಿಯ ಉತ್ಪನ್ನ ಅಂದರೆ ಜಿಡಿಪಿಯಲ್ಲಿ ಕೃಷಿಯ ಕೊಡುಗೆ ಕೇವಲ ಶೇ.18 ಮಾತ್ರ. ಒಮ್ಮೆ ಯೋಚನೆ ಮಾಡಿ ನೋಡಿ, ನಮ್ಮ ದೇಶದ ಶೇಕಡಾ 58 ಕೃಷಿಕರೆಲ್ಲರೂ ಮನಸ್ಸು ಮಾಡಿ ಶೇಕಡಾ 18ರ ಬದಲಿಗೆ ಶೇಕಡಾ 58ರಷ್ಟು ದೇಶದ ಜಿಡಿಪಿಗೆ ಕೊಡುಗೆ ನೀಡುವುದಾದರೆ, ನಮ್ಮ ದೇಶದ ಆರ್ಥಿಕತೆ ಉನ್ನತ ಶಿಖರವನ್ನೇರುವುದರಲ್ಲಿ ಸಂದೇಹವೇ ಇಲ್ಲ.
ರೈತರಿಗೆ ಸರ್ಕಾರದಿಂದ ಸಿಗುವ ಪ್ರಯೋಜನಗಳು: ಅನ್ನ ಕೊಡುವ ರೈತ ಚೆನ್ನಾಗಿದ್ದರೆ ಇಡೀ ದೇಶ ಚೆನ್ನಾಗಿದ್ದ ಹಾಗೆ ಅಂತಾರೆ. ಅದೇ ನಿಟ್ಟಿನಲ್ಲಿ ನಮ್ಮ ದೇಶದ ರೈತರ ಒಳಿತಿಗಾಗಿ ಹಾಗೂ ಕೃಷಿಯನ್ನು ಪೋತ್ಸಾಹಿಸುವ ಸಲುವಾಗಿ ಸರ್ಕಾರ ಬಹಳಷ್ಟು ಯೋಜನೆಗಳನ್ನು ಹೊರತಂದಿದೆ. ಪ್ರಧಾನ್ ಮಂತ್ರಿ ಕೃಷಿ ಸಿಂಚೈ ಯೋಜನೆ (ಪಿಎಂಕೆಎಸ್ವೈ), ಪರಂಪರಗತ್ ಕೃಷಿ ವಿಕಾಸ್ ಯೋಜನೆ (ಪಿಕೆವಿವೈ), ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್- ಧನ್ ಯೋಜನೆ, ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ (ಪಿಎಂಎಫ್ಬಿವೈ), ಜಾನುವಾರು ವಿಮಾ ಯೋಜನೆ, ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (ಎನ್ಎಂಎಸ್ಎ), ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ (E-NAM), ಸೂಕ್ಷ್ಮ ನೀರಾವರಿ ನಿಧಿ (ಮಿಫ್) ಮತ್ತು ಹಲವಾರು.