

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಮದುವೆ ಸೀಸನ್ ಆರಂಭವಾಗಲಿದ್ದು ಚಿನ್ನ, ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ದೀಪಾವಳಿ ಮುಗಿದ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಮಂದ ಪ್ರವೃತ್ತಿ ಮತ್ತು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಬಲಗೊಂಡಿರುವ ಪರಿಣಾಮ, ಭಾರತದಲ್ಲಿ ಮಂಗಳವಾರ ಚಿನ್ನದ ಬೆಲೆ ಸತತ ಆರನೇ ದಿನವೂ ಇಳಿಕೆ ಕಂಡಿದೆ. ಮತ್ತೊಂದೆಡೆ, ಬೆಳ್ಳಿ ದರವು ಒಂದೇ ದಿನ ಶೇಕಡಾ 5ರಷ್ಟು ಕುಸಿತ ಕಂಡು, ಕಳೆದ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ.
‘ಆಲ್ ಇಂಡಿಯಾ ಸರಫಾ ಅಸೋಸಿಯೇಷನ್’ (All India Sarafa Association) ನೀಡಿರುವ ಮಾಹಿತಿಯ ಪ್ರಕಾರ, 99.9 ಪ್ರತಿಶತ ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,400 ರೂಪಾಯಿ ಇಳಿಕೆಯಾಗಿದೆ. ಸೋಮವಾರ 1,40,000 ರೂಪಾಯಿಯಷ್ಟಿದ್ದ ದರ ಮಂಗಳವಾರ 1,38,600 ರೂಪಾಯಿಗೆ ಬಂದು ನಿಂತಿದೆ. ನವೆಂಬರ್ 9 ರಿಂದ ಇಲ್ಲಿಯವರೆಗೆ ಚಿನ್ನದ ದರದಲ್ಲಿ ಬರೋಬ್ಬರಿ 8,300 ರೂಪಾಯಿ (ಸುಮಾರು ಶೇ. 6ರಷ್ಟು) ಕಡಿತವಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಬೆಳ್ಳಿಯ ಮೇಲೂ ಮಾರಾಟದ ಒತ್ತಡ ತೀವ್ರಗೊಂಡಿದ್ದು, ಒಂದೇ ದಿನ ಪ್ರತಿ ಕೆಜಿಗೆ 9,500 ರೂಪಾಯಿ (ಶೇ. 5.3) ಕುಸಿತ ಕಂಡಿದೆ. ಸೋಮವಾರ 1,79,000 ರೂಪಾಯಿಯಷ್ಟಿದ್ದ ಬೆಳ್ಳಿ ದರ ಮಂಗಳವಾರ 1,69,500 ರೂಪಾಯಿಗೆ ಇಳಿದಿದೆ. ನವೆಂಬರ್ 5 ರಿಂದ ಕಳೆದ ಎಂಟು ದಿನಗಳಲ್ಲಿ ಬೆಳ್ಳಿ ಬರೋಬ್ಬರಿ 25,000 ರೂಪಾಯಿ (ಶೇ. 13ರಷ್ಟು) ಅಗ್ಗವಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ದರ ಕುಸಿಯಲು ಪ್ರಮುಖವಾಗಿ ಮೂರು ಕಾರಣಗಳಿವೆ:
ರೂಪಾಯಿ ಮೌಲ್ಯ ವೃದ್ಧಿ: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 93.51ಕ್ಕೆ ಬಲಗೊಂಡಿದೆ. ಇದು ಏಪ್ರಿಲ್ ನಂತರದ ಅತ್ಯಂತ ಬಲವಾದ ಮಟ್ಟವಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಆಮದು ವೆಚ್ಚ ತಗ್ಗಿ ಚಿನ್ನ-ಬೆಳ್ಳಿ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಜಾಗತಿಕ ಮಾರುಕಟ್ಟೆ ಒತ್ತಡ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 3,856.61 ಡಾಲರ್‌ನಲ್ಲಿ ಸ್ಥಿರವಾಗಿದ್ದರೆ, ಬೆಳ್ಳಿ ಶೇ. 1ರಷ್ಟು ಚೇತರಿಸಿಕೊಂಡು 47.44 ಡಾಲರ್‌ಗೆ ತಲುಪಿದೆ. ಆದಾಗ್ಯೂ, ಜನವರಿಯ ದಾಖಲೆಯ ಗರಿಷ್ಠ ಮಟ್ಟವಾದ 5,602 ಡಾಲರ್‌ಗೆ ಹೋಲಿಸಿದರೆ ಚಿನ್ನ ಸುಮಾರು ಶೇ. 31.5ರಷ್ಟು ಕುಸಿದಿದ್ದು, 2015 ರ ನಂತರದ ಅತ್ಯಂತ ಕಳಪೆ ವರ್ಷದತ್ತ ಸಾಗುತ್ತಿದೆ ಎಂದು ಜಾಗತಿಕ ತಜ್ಞರೊಬ್ಬರು ವಿಶ್ಲೇಷಿಸಿದ್ದಾರೆ.
ಅಮೆರಿಕದ ಫೆಡ್ ನೀತಿ: ಹೆಚ್ಚಿನ ಯುಎಸ್ ಬಾಂಡ್ ಮತ್ತು ಡಾಲರ್ ಬಲವರ್ಧನೆಯು ಹೂಡಿಕೆದಾರರನ್ನು ಚಿನ್ನದಿಂದ ದೂರ ಸರಿಯುವಂತೆ ಮಾಡಿದೆ. ಚಿನ್ನದ ಇಟಿಎಫ್‌ಗಳಿಂದ (ETFs) ಸಾಪ್ತಾಹಿಕವಾಗಿ ಸುಮಾರು 1,58,000 ಔನ್ಸ್‌ಗಳಷ್ಟು ಬಂಡವಾಳ ಹೊರಹೋಗಿದೆ.
ಬುಧವಾರ ನಡೆಯಲಿರುವ ಅಮೆರಿಕದ ಫೆಡರಲ್ ರಿಸರ್ವ್ ಸಭೆಯ ವಿವರಗಳು ಬೆಳ್ಳಿ ಮತ್ತು ಚಿನ್ನದ ಮುಂದಿನ ನಡೆಗೆ ದಿಕ್ಸೂಚಿಯಾಗಲಿವೆ. ಡಿಸೆಂಬರ್ ಮತ್ತು ಮುಂದಿನ ವರ್ಷದ ಮೊದಲಾರ್ಧದಲ್ಲಿ ಸಂಭವನೀಯ ಬಡ್ಡಿದರ ಏರಿಕೆಗೆ ಮಾರುಕಟ್ಟೆಗಳು ಸಜ್ಜಾಗುತ್ತಿರುವುದರಿಂದ, ಸದ್ಯಕ್ಕೆ ಬೆಲೆಬಾಳುವ ಲೋಹಗಳು ಕೆಳಮುಖ ಒತ್ತಡದಲ್ಲೇ ಮುಂದುವರಿಯಲಿವೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್).