

ಮುಂಬೈ: ಮಹಿಂದ್ರಾ ಥಾರ್ ನ ಸುಧಾರಿತ ಹೊಸ ಅವತಾರದ ರೂಪವನ್ನು ಮಹಿಂದ್ರಾ ಆ್ಯಂಡ್ ಮಹಿಂದ್ರಾ ಕಂಪನಿ ಶನಿವಾರ ಅನಾವರಣಗೊಳಿಸಿದೆ. ಹೊಸ ವಿನ್ಯಾಸ, ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಹೊಚ್ಚ ಹೊಸ ಲುಕ್ನೊಂದಿಗೆ ಥಾರ್ ಗಮನಸೆಳೆದಿದೆ. ಈ ಹೊಸ ವಾಹನ ಬಿಎಸ್-6 ಮಾದರಿಯದಾಗಿದ್ದು, 2.0 ಲೀಟರ್ ಎಂಸ್ಟಾಲಿಯನ್ ಟಿಜಿಡಿಐ ಪೆಟ್ರೋಲ್ ಇಂಜಿನ್ ಹಾಗೂ 2.2 ಲೀಟರ್ ಎಂಹಾಕ್ ಡೀಸೆಲ್ ಇಂಜಿನ್ ನಲ್ಲಿ ಲಭ್ಯವಿದೆ. ಹೊಸ ಥಾರ್ ಅಕ್ಟೋಬರ್ ಎರಡರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಅತ್ಯಾಧುನಿಕ ಥಾರ್ ಅನ್ನು ಅನಾವರಣಗೊಳಿಸುವ ಮೂಲಕ ನಾವು ಇತಿಹಾಸವನ್ನು ಮರುಸೃಷ್ಟಿಸಲು ಹೊರಟಿದ್ದೇವೆ. ವಾಹನ ಕ್ಷೇತ್ರದಲ್ಲಿ ಈ ಮಾಡೆಲ್ ಬಲವಾದ ಛಾಪು ಮೂಡಿಸಿದ್ದು, ಮಹಿಂದ್ರಾದ ಹೆಸರನ್ನು ಎತ್ತಿಹಿಡಿದಿದೆ. ಇದೀಗ ಮತ್ತೊಮ್ಮೆ ಅದನ್ನು ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಪವನ್ ಗೋಯೆಂಕಾ ತಿಳಿಸಿದ್ದಾರೆ.
ಇದನ್ನೂ ಓದಿ: VIDEO: ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕ ಕಾರು ಇದು..
ಈ ಎಸ್ಯುವಿಯ ಸಂಪೂರ್ಣ ವಿನ್ಯಾಸ ಭಾರತದ್ದೇ ಆಗಿದ್ದು, ಇಲ್ಲೇ ಉತ್ಪಾದನೆಯನ್ನೂ ಹೊಂದಿದೆ. ಬಹುತೇಕ ಬಿಡಿಭಾಗಗಳು ಕೂಡ ಸ್ಥಳೀಯವಾಗಿ ಉತ್ಪಾದಿಸಿದ್ದೇ ಆಗಿದೆ. ಈ ಮಾಡೆಲ್ ಅನ್ನು ಕಂಪನಿಯ ನಾಶಿಕ್ ಘಟಕದಲ್ಲಿ ಸಿದ್ಧಗೊಳಿಸಲಾಗಿದ್ದು, ಐಕಾನಿಕ್ ಮಾಡೆಲ್ ಸದ್ಯದಲ್ಲೇ ಎಸ್ಯುವಿ ಸೆಕ್ಟರ್ನಲ್ಲಿ ಸದ್ದುಮಾಡಲಿದೆ ಎಂದು ಗೋಯೆಂಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರ ವಿನ್ಯಾಸದ ಲುಕ್ಗೆ ಮೇಲಿನ ವಿಡಿಯೋ ಗಮನಿಸಬಹುದು. (ಏಜೆನ್ಸೀಸ್)