

ವೇಣುವಿನೋದ್ ಕೆ.ಎಸ್. ಮಂಗಳೂರು: ಮುಂಬೈ ಸಹಿತ ನಾಡಿನ ಹಲವೆಡೆ ಅಧಿಕ ಬೇಡಿಕೆ ಹೊಂದಿರುವ ಉಡುಪಿ ಜಿಲ್ಲೆಯ ಕಾರ್ಕಳದಲ್ಲೇ ಹೆಚ್ಚು ಬೆಳೆಯಲಾಗುವ ಕಾರ್ಕಳ ಕಜೆ ಅಕ್ಕಿ ಈಗ ಬ್ರ್ಯಾಂಡಿಂಗ್ ಆಗುವ ಹಂತಕ್ಕೆ ತಲುಪಿದೆ.
ಕಾರ್ಕಳ ಕಜೆ ವೈಶಿಷ್ಟ್ಯ *ಅನ್ಪಾಲಿಷ್ಡ್ ಅಕ್ಕಿಗೆ ತುಂಬಾ ಬೇಡಿಕೆ *ಭತ್ತ ಅಡ್ಡ ಬೀಳುವುದಿಲ್ಲ, ಕಾಂಡ ಗಟ್ಟಿ *ಇದರ ಬೈಹುಲ್ಲೂ ಜಾನುವಾರುಗಳಿಗೆ ಇಷ್ಟ, ಪ್ರೊಟೀನ್ ಅಂಶವೂ ಜಾಸ್ತಿ
ಕುಚ್ಚಲು ಅಕ್ಕಿ ಕರಾವಳಿಗರಿಗೆ ಅಚ್ಚುಮೆಚ್ಚು. ಅದರಲ್ಲೂ ಕಜೆ ಇರುವ ಅಕ್ಕಿಗೆ ಬೇಡಿಕೆ ಜಾಸ್ತಿ. ಆರೋಗ್ಯಕ್ಕೂ ಅದು ಪೂರಕ, ಬೇಗ ಜೀರ್ಣವಾಗುತ್ತದೆ ಎಂಬ ವಾದವೂ ಇದೆ. 500ಕ್ಕೂ ಹೆಚ್ಚು ಕೃಷಿಕರು ಇದನ್ನು ಕಾರ್ಕಳ ಆಸುಪಾಸಿನಲ್ಲಿ ಬೆಳೆಯುತ್ತಿದ್ದು, ಮಿಲ್ಗಳಲ್ಲಿ ಬೇರೆ ತಳಿಯೊಂದಿಗೆ ಮಿಶ್ರ ಆಗುವುದರಿಂದ ಅಸಲಿ ಕಾರ್ಕಳ ಕಜೆ ಸಿಗುತ್ತಿಲ್ಲ. ಈ ಕಾರಣಕ್ಕಾಗಿ ಬ್ರ್ಯಾಂಡಿಂಗ್ ಮಾಡಲು ಮುಂದಾಗಿದ್ದೇವೆ ಎನ್ನುತ್ತಾರೆ ಕಾರ್ಕಳ ನಿಟ್ಟೆಯ ಪ್ರಗತಿಪರ ಕೃಷಿಕ ಹಾಗೂ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ನವೀನ್ಚಂದ್ರ ಜೈನ್.
ರೈತರನ್ನು ಸೇರಿಸಿ ಬ್ರ್ಯಾಂಡಿಂಗ್: ಕೆ.ಜಿ.ಗೆ 20 ರೂ.ನಂತೆ ಕಜೆ ಭತ್ತವನ್ನು ಮಿಲ್ನವರು ಖರೀದಿಸುತ್ತಾರೆ, ಬೇರೆ ತಳಿಗಳನ್ನು ಕಡಿಮೆಗೆ ಖರೀದಿಸಿ ಎಲ್ಲವನ್ನೂ ಮಿಶ್ರ ಮಾಡುವುದರಿಂದ ಒರಿಜಿನಲ್ ಕಜೆ ಕಾರ್ಕಳ ಸಿಗುತ್ತಿಲ್ಲ. ಹಾಗಾಗಿ ನಾವೇ ಈಗಾಗಲೇ 260 ಮಂದಿಯನ್ನು ಸಂರ್ಪಸಿ ಸಹಕಾರ ಕೇಳಿದ್ದೇವೆ. ಸದ್ಯ ಮುಂಡ್ಕೂರಿನ ಒಬ್ಬ ಮಿಲ್ ಮಾಲೀಕರು ಕಾರ್ಕಳ ಕಜೆ ಬ್ರ್ಯಾಂಡ್ ಮಾಡಿಕೊಡುವುದಕ್ಕೂ ಒಪ್ಪಿದ್ದಾರೆ ಎಂದು ಜೈನ್ ತಿಳಿಸಿದ್ದಾರೆ.
ಕನಿಷ್ಠ 5 ಸಾವಿರ ಕ್ವಿಂಟಾಲ್ ಕಾರ್ಕಳ ಕಜೆ ಭತ್ತ ಸಿಕ್ಕಿದರೆ, ಅದರಲ್ಲಿ 3500 ಕ್ವಿಂಟಾಲ್ ಅಕ್ಕಿ ಸಿಗಲಿದೆ. ಕಾರ್ಕಳ ಬ್ರ್ಯಾಂಡ್ಗೆ ಬೇಕಾದ ಮೌಲ್ಡ್ ತಯಾರಿಸಿ, ಗೋಣಿಚೀಲಗಳನ್ನು ಮುದ್ರಿಸುವುದಕ್ಕೆ ಸುಮಾರು 2 ಲಕ್ಷ ರೂ. ವೆಚ್ಚವಿದೆ. ಅದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ನವೆಂಬರ್ಗೆ ಈ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಕೃಷಿಕರು.