ಫಾರಿನ್ ಕಲರ್ ಟಿವಿ ಆಸೆ ಬಿಟ್ಟುಬಿಡಿ: ಇನ್ನೇನಿದ್ರೂ ಮೇಡ್ ಇನ್ ಇಂಡಿಯಾ ಜಮಾನಾ

color tv stes
Published on

ನವದೆಹಲಿ: ಫಾರಿನ್ ಕಲರ್​ ಟಿವಿ ಬೇಕು ಅಥವಾ ಚೀನಾ ಸೆಟ್​ ತಗೊಳ್ಳುವ ಆಸೆ ಇದ್ದರೆ ಬಿಟ್ಟುಬಿಡಿ. ಇನ್ನೇನಿದ್ದರೂ ಮೇಡ್ ಇನ್ ಇಂಡಿಯಾ ಜಮಾನಾ. ಕಲರ್​ ಟಿವಿ ಸೆಟ್​ಗಳ ಆಮದು ಮಾಡಿಕೊಳ್ಳುವುದರ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಚೀನಾದಿಂದ ಕಲರ್ ಟಿವಿ ಆಮದಾಗುವುದನ್ನು ತಡೆದು ಸ್ಥಳೀಯವಾಗಿ ಕಲರ್ ಟಿವಿ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವುದೇ ಕೇಂದ್ರ ಸರ್ಕಾರದ ಈ ನಡೆಯ ಉದ್ದೇಶ. ಈ ಸಂಬಂಧ ಡೈರೆಕ್ಟರೇಟ್​ ಜನರಲ್​ ಆಫ್ ಫಾರಿನ್ ಟ್ರೇಡ್​(ಡಿಜಿಎಫ್​ಟಿ) ಅಧಿಸೂಚನೆ ಪ್ರಕಟಿಸಿದೆ.

ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ(2020ರ ಮಾರ್ಚ್ 31) ಭಾರತದಲ್ಲಿ ಮಾರಾಟವಾಗಿರುವ ಕಲರ್​ ಟಿವಿಗಳ ಮೌಲ್ಯ 5,850 ಕೋಟಿ ರೂಪಾಯಿ. ಇದರಲ್ಲಿ 3205 ಕೋಟಿ ರೂಪಾಯಿ ಉತ್ಪನ್ನ ವಿಯೆಟ್ನಾಂನದ್ದು. 2,186 ಕೋಟಿ ರೂಪಾಯಿ ಉತ್ಪನ್ನ ಚೀನಾದ್ದು. ಹೀಗಾಗಿ ಚೀನಾದ ರಫ್ತು ಮತ್ತು ಹೂಡಿಕೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಚೀನಾದ ರಫ್ತು ಕಡಿಮೆ ಮಾಡುವ ಮೂಲಕ ಅದರ ಮೇಲೆ ಅವಲಂಬಿತವಾಗಿರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಈಗಾಗಲೇ ಏಪ್ರಿಲ್​ನಲ್ಲೇ ವಿದೇಶಿ ನೇರ ಹೂಡಿಕೆ(ಎಫ್​ಡಿಐ) ನಿಯಮದಲ್ಲೂ ಭಾರಿ ತಿದ್ದುಪಡಿ ತರಲಾಗಿದೆ. ಭಾರತೀಯ ರೈಲ್ವೆ ಮತ್ತು ರಸ್ತೆ ಸಾರಿಗೆ ಇಲಾಖೆಗಳು ಚೀನಾ ಕಂಪನಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿವೆ. ಟಿಕ್ ಟಾಕ್ ಸೇರಿ 59 ಆ್ಯಪ್​ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಲಡಾಖ್​ನಲ್ಲಿ ಚೀನಾ ಸೇನೆ ಅತಿಕ್ರಮಿಸಿದ್ದು, ಆಕ್ರಮಣಕಾರಿ ಧೋರಣೆ ತಳೆದಿರುವುದಕ್ಕೆ ಗಡಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಿದ ಬಳಿಕ ವಾಣಿಜ್ಯ ಸಮರವನ್ನೂ ಸಾರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net